ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಸ್ನೇಹಿತರೇ ಸೇರಿ ತನ್ನವನನ್ನೇ ಅರೆನಗ್ನಗೊಳಿಸಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.ಶ್ರೀನಿವಾಸ್ (36), ಮೂಲತಃ ಹೊಸಮನೆಯವರಾಗಿದ್ದು ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು.
ಫೆಬ್ರವರಿ 12ರ ರಾತ್ರಿ ಗಾಜನೂರಿನ ‘ಸ್ನೇಹ ಬಾರ್’ ಎದುರಿಗಿನ ಕೃಷಿ ಪತ್ತಿನ ಸಹಕಾರ ಸಂಘದ ಅಂಗಳದಲ್ಲಿ ಶ್ರೀನಿವಾಸ್ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಮದ್ಯದ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಯಾವುದೋ ವಿಷಯಕ್ಕೆ ಜಗಳ ಶುರುವಾಗಿದೆ.

ಗಲಾಟೆ ವಿಕೋಪಕ್ಕೆ ಹೋದಾಗ ಹಂತಕರು ಶ್ರೀನಿವಾಸ್ ಕಾಲು ಮುರಿದು, ಪ್ಯಾಂಟ್ ಬಿಚ್ಚಿ ಅರೆನಗ್ನಗೊಳಿಸಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಲೆಯ ಮೇಲೆ ಬೃಹತ್ ಕಲ್ಲು ಎತ್ತಿಹಾಕಿ ವಿಕೃತವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾದ ತಕ್ಷಣ ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ಹಾಗೂ ತುಂಗಾ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ನನ್ನ ತಮ್ಮನನ್ನು ಅವನ ಸ್ನೇಹಿತರೇ ಕೊಂದಿದ್ದಾರೆ, ಅವರಿಗೆ ತಕ್ಕ ಶಿಕ್ಷೆಯಾಗಬೇಕು,” ಎಂದು ಮೃತನ ಸಹೋದರಿ ಸುಮಾ ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪೊಲೀಸರಲ್ಲಿ ಅನುಮಾನ ಮೂಡಿಸಿದ್ದು, ಕೊಲೆಗೆ ಕೇವಲ ಮದ್ಯದ ಅಮಲು ಕಾರಣವೇ ಅಥವಾ ಬೇರೆ ಏನಾದರೂ ವೈಷಮ್ಯವಿತ್ತೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

