ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರ ವಿಚಾರಣೆಯ ವೇಳೆ ಕೃಪಾ ಆಳ್ವ (Krupa Alva) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಯ ನೆಪದಲ್ಲಿ ಪದೇಪದೇ ಕಚೇರಿಗೆ ಕರೆಸುತ್ತಿರುವುದಕ್ಕೆ ಸಿಸಿಬಿ ತನಿಖಾಧಿಕಾರಿ ರವಿ ವಿರುದ್ಧ ಅವರು ಕೆಂಡಾಮಂಡಲರಾಗಿದ್ದಾರೆ. ಈಗಾಗಲೇ ಮೂರು ಬಾರಿ ಅಧಿಕೃತವಾಗಿ ಹೇಳಿಕೆ ದಾಖಲಿಸಿಕೊಂಡ ನಂತರವೂ, ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿರುವುದು ಕೃಪಾ ಆಳ್ವ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಸಿಸಿಬಿ ಕಚೇರಿಯಲ್ಲಿ ವಿಚಾರಣೆಯ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದ ಕೃಪಾ ಆಳ್ವ, “ಎಷ್ಟು ಬಾರಿ ಹೇಳಿಕೆ ದಾಖಲಿಸಬೇಕು? ನನ್ನದು ಯಾವುದೇ ತಪ್ಪಿಲ್ಲ, ಆದರೂ ಪದೇಪದೇ ವಿಚಾರಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದೀರಿ” ಎಂದು ಆಕ್ರೋಶ ಹೊರಹಾಕಿದ್ದಾರೆ. ನಿರಂತರ ವಿಚಾರಣೆಯಿಂದ ಬೇಸತ್ತಿರುವ ಅವರು, ಈ ತನಿಖೆ ಯಾವ ಉದ್ದೇಶದಿಂದ ಕೂಡಿದೆ ಮತ್ತು ಯಾರ ಒತ್ತಡದ ಮೇಲೆ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಸಿಸಿಬಿ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ತನಿಖೆ ಕುರಿತು ಸಚಿವ ಯತೀಂದ್ರ ಸ್ಫೋಟಕ ಹೇಳಿಕೆ
ಪ್ರಕರಣದ ತನಿಖೆ ತೀವ್ರಗೊಂಡ ಬೆನ್ನಲ್ಲೇ ಈ ಹಿಂದೆ ಸಿಸಿಬಿ ಪೊಲೀಸರು ಕೃಪಾ ಆಳ್ವ ಅವರಿಗೆ ಲುಕೌಟ್ ನೋಟಿಸ್ (Lookout Notice) ಹೊರಡಿಸಿದ್ದರು. ಆ ನಂತರ ಅವರು ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಅವರ ಪಾತ್ರವೇನು ಮತ್ತು ಘಟನೆಯ ಕುರಿತು ಅವರಿಗೆ ತಿಳಿದಿರುವ ಮಾಹಿತಿಯನ್ನು ಕಲೆಹಾಕಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಸ್ಟಿಂಗ್ ಆಪರೇಷನ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಕೃಪಾ ಆಳ್ವ, “ನನ್ನ ಜೊತೆ ಖಾಸಗಿ ಮಾಧ್ಯಮದ ಪತ್ರಕರ್ತ ಹಾಗೂ ಮತ್ತೊಬ್ಬರು ಬಂದಿದ್ದರು. ಆ ಸಂದರ್ಭದಲ್ಲಿ ಅವರು ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ ಎಂಬುದೇ ನನಗೆ ಗೊತ್ತಿರಲಿಲ್ಲ” ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


