Breaking News

ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ, ಇಂದು ಚೊಕ್ಕಾಡಿಗೆ, ನಾಳೆ ಪುತ್ತೂರಿಗೆ

ಮಂಗಳೂರು: ಶ್ರೀ ಸತ್ಯಸಾಯಿ ಬಾಬಾರವರ ಅವತಾರದ ಶತಮಾನೋತ್ಸವದ ಪ್ರಯುಕ್ತ ಬಾಬಾರವರ ದಿವ್ಯಾವತಾರದ ಸೌರಭವನ್ನು ಪಸರಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಯಾತ್ರೆ ಕೈಗೊಂಡಿರುವ ಪ್ರೇಮ ಪ್ರವಾಹಿನಿ ರಥ ಇಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ್ದು, ನಾಳೆ ಪುತ್ತೂರು ಪ್ರವೇಶಿಸಲಿದೆ.

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ 2025ರ ಎಪ್ರಿಲ್ 25 ರಂದು ಭಾರತದಾದ್ಯಂತ ಹೊರಟ 5 ದಿವ್ಯ ರಥಗಳು ಬೇರೆ ಬೇರೆ ರಾಜ್ಯಗಳ 500 ಗ್ರಾಮಗಳಲ್ಲಿ ಸಂಚರಿಸಿ (ಸುಮಾರು 3,50,000 ಕಿ.ಮೀ) ನವೆಂಬರ್ 25 ರಂದು ಮರಳಿ ಪುಟ್ಟಪರ್ತಿಯನ್ನು ಸೇರಲಿವೆ.

Advertisement

ಐದು ರಥಗಳ ಪೈಕಿ ಒಂದು ರಥವು ಕರ್ನಾಟಕ ರಾಜ್ಯದಲ್ಲಿ ಸಂಚರಿಸುತ್ತಿದ್ದು ಇಂದು (ಮಾ.7) ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದೆ. ಈ ರಥವು ಭಗವಾನ್ ಬಾಬಾರವರ ದಿವ್ಯ ಸನ್ನಿಧಿ ಹಾಗೂ ಪಾದುಕೆಗಳನ್ನು ಒಳಗೊಂಡಿರುತ್ತದೆ. ಸದ್ಯ ರಥವು ಸುಳ್ಯದ ಚೊಕ್ಕಾಡಿಯಲ್ಲಿದೆ.

ನಾಳೆ ಪ್ರೇಮ ಪ್ರವಾಹಿನಿ ರಥ ಪುತ್ತೂರು ಪ್ರವೇಶ

ಪ್ರೇಮ ಪ್ರವಾಹಿನಿ ದಿವ್ಯ ರಥವು ನಾಳೆ ಪುತ್ತೂರಿಗೆ ಆಗಮಿಸಲಿದೆ. ಮಧ್ಯಾಹ್ನ 2.30ಕ್ಕೆ ಕೌಡಿಚಾರು ಶ್ರೀ ಕೃಷ್ಣ ಭಜನಾ ಮಂದಿರದ ಎದುರು ರಥವನ್ನು ಸ್ವಾಗತಿಸಿ ವಾಹನ ಜಾಥಾ ಮೂಲಕ ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀ ಸತ್ಯಸಾಯಿ ಮಂದಿರಕ್ಕೆ ರಥ ಆಗಮಿಸುತ್ತದೆ. ಅಲ್ಲಿಂದ ಮಂಗಳವಾದ್ಯಗಳು, ಭಜನೆ ಮತ್ತು ಭಕ್ತ ಸಮೂಹದ ಮೆರವಣಿಗೆಯಲ್ಲಿ ರಥವನ್ನು ಮಹಾಮಾಯ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಅಲ್ಲಿ ವಿಶೇಷ ಸಭಾ ಕಾರ್ಯಕ್ರಮ ಜರುಗಲಿದೆ.

ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧಕ್ಷ ಯಂ.ಪದ್ಮನಾಭ ಪೈ ಯವರು ವಹಿಸಲಿದ್ದಾರೆ. ಶ್ರೀ ಜಗನ್ನಾಥ ನಾಡಿಗೇರ, ದಾವಣಗೆರೆ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಈ ಸಭೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಮಹಿಳಾ ಸೇವಾ ಆಯೋಜಕರಾದ ಪ್ರಿಯಾ.ಪಿ ಪೈ, ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರಸನ್ನ. ಯನ್. ಭಟ್ ಇವರು ಭಾಗವಹಿಸಲಿದ್ದಾರೆ.

ಅಲ್ಲದೆ, ಪುತ್ತೂರು ಸಮಿತಿಯ ಯುವ ಕಲಾವಿದರಿಂದ “ಶ್ರೀ ಸತ್ಯಸಾಯಿ ನೃತ್ಯ ವಂದನೆ” ಭರತನಾಟ್ಯ, ಶಿಶುವಿಕಾಸ ಕೇಂದ್ರದ ಮಕ್ಕಳಿಂದ ನೃತ್ಯ ಮತ್ತು ಯುವ ಕಲಾವಿದರಿಂದ “ಪ್ರಣಮಾಮಿ ಸಾಯೀಶ” ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಮಂಗಳಾರತಿಯ ನಂತರ ಪ್ರಸಾದ ವಿತರಣೆ ನಡೆಯಲಿದೆ. ಮಾ.9 ರಂದು ಶ್ರೀ ಮಹಾಲಿಂಗೇಶ್ವರ ದೇವರ ಎದುರು ಮಂಗಳಾರತಿ ಸ್ವೀಕರಿಸಿದ ನಂತರ ರಥವು ಉಪ್ಪಿನಂಗಡಿ, ಧರ್ಮಸ್ಥಳ, ಅಳಿಕೆಗೆ ಪ್ರಯಾಣಿಸಿ ಅಲ್ಲಿಂದ ಕೇರಳ ಪ್ರವೇಶಿಸಿ ಮಾ.12 ರಂದು ರಂದು ಮತ್ತೆ ಮಂಗಳೂರಿನ ತಲಪಾಡಿಗೆ ಪ್ರವೇಶಿಸಲಿದೆ. 14ರಂದು ಮಂಗಳೂರು ಸಮಿತಿಯು ಉಡುಪಿ ಜಿಲ್ಲೆಗೆ ರಥವನ್ನು ಬೀಳ್ಕೊಡಲಿದೆ.

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ ಬಾಬಾ ಅವರನ್ನು ಅಥವಾ ಅವರ ದೈವತ್ವವನ್ನು ಪ್ರಚಾರ ಮಾಡುವ ಒಂದು ಉಪಕ್ರಮವಲ್ಲ. ಬದಲಾಗಿ ಭಗವಾನ್ ಬಾಬಾರವರ “ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ- ಎಂದಿಗೂ ಸಹಾಯ ಮಾಡಿ, ಎಂದಿಗೂ ನೋಯಿಸಬೇಡಿ” ಎಂಬ ಶಾಶ್ವತ ಸಂದೇಶವನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ಉದ್ದೇಶ ಹೊಂದಿದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು