ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎನ್ನಬಹುದಾದ ವಿಭಿನ್ನ ತೀರ್ಪೊಂದನ್ನು ಸ್ಥಳೀಯ ನ್ಯಾಯಾಲಯ ನೀಡಿದ್ದು, ಹಲವು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಯುವಕನಿಗೆ ಕೇವಲ ದಂಡ ವಿಧಿಸುವುದರ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷೆ ವಿಧಿಸಿ ಆದೇಶಿಸಿದೆ.
ಸುಳ್ಯದ ರಕ್ಷಿತ್ ಜಿ ಎಂಬ ಯುವಕನ ವಿರುದ್ಧ ಐಎಂವಿ ಕಾಯ್ದೆಯ ಸೆಕ್ಷನ್ 119 r/w 177, 184 ಹಾಗೂ 194(C) ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಈ ಪ್ರಕರಣಗಳ ಚಾರ್ಜ್‌ಶೀಟ್ ಅನ್ನು ಸುಳ್ಯ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

15 ದಿನಗಳ ಸಮುದಾಯ ಸೇವೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡು ಪ್ರಕರಣಗಳಿಗೆ ಒಟ್ಟು 3,000 ರೂ. ದಂಡ ವಿಧಿಸಿದೆ. ಮೂರನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರಿಂದ ಮಾರ್ಚ್ 29ರವರೆಗೆ 15 ದಿನಗಳ ಕಾಲ ‘ಸಮುದಾಯ ಸೇವೆ’ (Community Service) ಮಾಡಲು ಆದೇಶಿಸಿದೆ.
ಇದನ್ನೂ ಓದಿ: 48 ಪಂಚಾಯತ್‌ಗಳ ಪ್ಲಾಸ್ಟಿಕ್ ಕಸದಿಂದ ಪುತ್ತೂರಿನಲ್ಲಿ ಪ್ರಥಮಬಾರಿಗೆ ರಸ್ತೆಗೆ ಡಾಂಬಾರು
ನ್ಯಾಯಾಲಯದ ಸೂಚನೆಯಂತೆ ರಕ್ಷಿತ್ ಸುಳ್ಯ ಪಟ್ಟಣದ ಪ್ರಮುಖ ವೃತ್ತಗಳು ಮತ್ತು ಸಂಚಾರ ದಟ್ಟಣೆ ಇರುವ ಸ್ಥಳಗಳಲ್ಲಿ ಟ್ರಾಫಿಕ್ ನಿಯಮಗಳ ಕುರಿತು ಮಾಹಿತಿಯಿರುವ ಫಲಕಗಳನ್ನು ಹಿಡಿದು ನಿಂತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗಿದೆ. ಜೊತೆಗೆ ಪೊಲೀಸ್ ಇಲಾಖೆಗೆ ಟ್ರಾಫಿಕ್ ನಿಯಂತ್ರಣದಲ್ಲಿ ಸಹಾಯ ಮಾಡುವುದು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನೂ ನಿರ್ವಹಿಸಬೇಕಾಗಿದೆ.
ಚಾಲನಾ ಪರವಾನಗಿ ಅಮಾನತು
ಯುವಕ ಪದೇಪದೇ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವನ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತುಗೊಳಿಸಲು ಆದೇಶಿಸಿದೆ.
ಈ ವಿಭಿನ್ನ ಶಿಕ್ಷೆ ಸುಳ್ಯ ತಾಲೂಕಿನಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಕೇವಲ ಹಣದ ದಂಡಕ್ಕಿಂತ ಇಂತಹ ಜಾಗೃತಿ ಆಧಾರಿತ ಶಿಕ್ಷೆಗಳು ಜನರಲ್ಲಿ ಕಾನೂನು ಪಾಲನೆಯ ಮಹತ್ವವನ್ನು ಅರಿವಿಗೆ ತರುವುದಕ್ಕೆ ಹೆಚ್ಚು ಪರಿಣಾಮಕಾರಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುಧಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

