ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುವ ಸುಳ್ಯ ಜಾತ್ರೆ ಕರಾವಳಿ ಕರ್ನಾಟಕದ ಪ್ರಮುಖ ಜನಪರಂಪರೆಯ ಹಬ್ಬಗಳಲ್ಲಿ ಒಂದಾಗಿದೆ. ಈ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಕೃತಿ, ಜನಜೀವನ ಮತ್ತು ಸಾಮಾಜಿಕ ಏಕತೆಯ ಪ್ರತೀಕವಾಗಿಯೂ ಗುರುತಿಸಿಕೊಂಡಿದೆ. ಊರ ಪರವೂರಿನಿಂದಲೂ ಸುಳ್ಯ ಜಾತ್ರೆಗೋಸ್ಕರ ಜನಸಾಗರವೇ ಬರುವುದು.
ಜಾತ್ರೆಯ ಪ್ರಮುಖ ಆಕರ್ಷಣೆ ರಥೋತ್ಸವ ;

ಈ ಸುಳ್ಯ ಜಾತ್ರೆಯ ಕೇಂದ್ರಬಿಂದುವಾಗಿರುವುದು ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯ. ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳು, ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆಗಳು ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಸಂಭ್ರಮವನ್ನು ಉಂಟುಮಾಡುತ್ತವೆ. ಜಾತ್ರೆಯ ದಿನಗಳಲ್ಲಿ ದೂರದ ಊರುಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಇನ್ನೊಂದೆಡೆ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ರಥೋತ್ಸವ ಗಮನಸೆಳೆಯುತ್ತದೆ. ಭಕ್ತರು ಭಕ್ತಿಭಾವದಿಂದ ರಥವನ್ನು ಎಳೆಯುವ ಕ್ಷಣಗಳು ಆಧ್ಯಾತ್ಮಿಕ ಉಲ್ಲಾಸವನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ಹೋಮ, ಹವನ, ವಿಶೇಷ ಅಲಂಕಾರ ಪೂಜೆಗಳು ಜಾತ್ರೆಗೆ ಧಾರ್ಮಿಕ ಗಂಭೀರತೆಯನ್ನು ನೀಡುತ್ತವೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಂಭ್ರಮದಿಂದ ನಡೆಯಲಿದೆ ;
ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.02 ರಂದು ಪ್ರಾರಂಭಗೊಂಡಿದ್ದು ಜ.12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಂಭ್ರಮದಿಂದ ನಡೆಯಲಿದೆ. ಜ.05 ರಂದು ಶ್ರೀ ಪನ್ನೆಬೀಡು ಭಗವತಿ ಸ್ಥಾನ ಮತ್ತು ನಾಲ್ಕು ಸ್ಥಾನ ಚಾವಡಿ ಬೂಡುವಿನಲ್ಲಿ ಪ್ರತಿಷ್ಠಾ ದಿನ ಮಹಾಪೂಜೆ ನಡೆಯಲಿದೆ. ಜ.07 ರಂದು ರಾತ್ರಿ ಉತ್ಸವ ಬಲಿ ಹೊತಡುವುದು. ಜ.08 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ, ನಡುಬೆಳಗು, ಬಟ್ಟಲು ಕಾಣಿಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ ಹಾಗೂ ಜ.10 ರಂದು ಬೆಳಿಗ್ಗೆ ದೊಡ್ಡದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ನಂತರ ಬ್ರಹ್ಮರಥೋತ್ಸವ ನಡೆಯಲಿರುವುದು ಎಂದು ವರದಿಯಾಗಿದೆ.

