T20 WC: ಕೊನೆಗೂ ಭಾರತದ ಜೊತೆ ಆಡಲು ಒಪ್ಪಿದ ಪಾಕ್, ನಿಗದಿಯಂತೆ IND vs PAK ಪಂದ್ಯ

T20 World Cup Pakistan finally agreed to play with India, IND vs PAK match as scheduled

ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಮುಂದುವರಿದಿದ್ದ ಅತಿದೊಡ್ಡ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ.

ಸೋಮವಾರ ತಡರಾತ್ರಿ ಹೊರಡಿಸಲಾದ ಅಧಿಸೂಚನೆಯಲ್ಲಿ, ಫೆಬ್ರವರಿ 15, 2026ರಂದು ನಿಗದಿಯಾಗಿರುವ ಭಾರತ–ಪಾಕಿಸ್ತಾನ ಪಂದ್ಯವನ್ನು ನಿಗದಿತ ವೇಳಾಪಟ್ಟಿಯಂತೆಯೇ ಆಡಲು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದು ಸ್ಪಷ್ಟಪಡಿಸಲಾಗಿದೆ.

Advertisement

ಈ ಮಹತ್ವದ ನಿರ್ಧಾರವು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡುವೆ ಲಾಹೋರ್‌ನಲ್ಲಿ ನಡೆದ ತ್ರಿಪಕ್ಷೀಯ ಮಾತುಕತೆಗಳ ಒಂದು ದಿನದ ಬಳಿಕ ಪ್ರಕಟವಾಗಿದೆ.

ಇದನ್ನೂ ಓದಿ: ಓಮನ್ ವಿರುದ್ಧ ಗೆಲುವಿನ ಮೂಲಕ ಶುಭಾರಂಭ ಮಾಡಿದ ಜಿಂಬಾಬ್ವೆ

Advertisement

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಪಂದ್ಯ ಎಂದೇ ಪರಿಗಣಿಸಲ್ಪಡುವ ಭಾರತ–ಪಾಕಿಸ್ತಾನ ಮುಖಾಮುಖಿಗೆ ಇದ್ದ ಎಲ್ಲಾ ಅಡ್ಡಿಗಳು ಇದೀಗ ನಿವಾರಣೆಯಾಗಿವೆ. ಭಾರತದ ವಿರುದ್ಧ ಪಂದ್ಯವಾಡುವುದನ್ನು ನಿಷೇಧಿಸುವ ಹಠಮಾರಿತನ ತೋರಿದ್ದ ಪಾಕಿಸ್ತಾನಕ್ಕೆ ಐಸಿಸಿ ಕಠಿಣ ನಿಲುವು ತೋರಿದ್ದು, ಕೊನೆಗೂ ಪಿಸಿಬಿ ತನ್ನ ಸರ್ಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ ಒಂದು ವಾರದಿಂದ ದೇಶ-ವಿದೇಶಗಳಲ್ಲಿ ಹರಡಿದ್ದ ಊಹಾಪೋಹಗಳು ಮತ್ತು ಅನುಮಾನಗಳಿಗೆ ಅಂತ್ಯ ಬಿದ್ದಿದೆ.

ಪಾಕಿಸ್ತಾನ ಸರ್ಕಾರದ ಹೇಳಿಕೆ

ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ, “ಬಹುಪಕ್ಷೀಯ ಚರ್ಚೆಗಳಲ್ಲಿ ಸಾಧಿಸಿದ ಫಲಿತಾಂಶಗಳು ಹಾಗೂ ಸ್ನೇಹಪರ ರಾಷ್ಟ್ರಗಳ ವಿನಂತಿಯನ್ನು ಗಮನದಲ್ಲಿಟ್ಟುಕೊಂಡು, ಫೆಬ್ರವರಿ 15 ರಂದು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ನಿಗದಿತ ಪಂದ್ಯಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಮೈದಾನಕ್ಕೆ ಇಳಿಸಲು ಈ ಮೂಲಕ ನಿರ್ದೇಶಿಸಲಾಗುತ್ತದೆ” ಎಂದು ತಿಳಿಸಿದೆ.

ಇದನ್ನೂ ಓದಿ: ಇಟಲಿ ವಿರುದ್ಧ ಸುಲಭ ಜಯ ಸಾಧಿಸಿದ ಸ್ಕಾಟ್ಲೆಂಡ್

ಅಲ್ಲದೆ, “ಕ್ರಿಕೆಟ್‌ನ ಉತ್ಸಾಹವನ್ನು ಉಳಿಸುವುದು ಮತ್ತು ಈ ಜಾಗತಿಕ ಕ್ರೀಡೆಯ ನಿರಂತರತೆಯನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಸರ್ಕಾರ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ವಿಶ್ವದ ಅತ್ಯಂತ ದುಬಾರಿ ಪಂದ್ಯ

ಇನ್ನು, ಭಾರತ–ಪಾಕಿಸ್ತಾನ ಪಂದ್ಯವನ್ನು ಟೂರ್ನಿಯಲ್ಲಿ ಮಾತ್ರವಲ್ಲದೆ, ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಪಂದ್ಯ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಈ ಒಂದೇ ಪಂದ್ಯದಿಂದ 4000 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಸೃಷ್ಟಿಯಾಗಲಿದೆ ಎಂಬ ಅಂದಾಜು ವ್ಯಕ್ತವಾಗಿದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇದು ಕೇವಲ ಪಂದ್ಯವಲ್ಲ, ಭಾವನೆ, ಪ್ರತಿಷ್ಠೆ ಮತ್ತು ರೋಮಾಂಚನದ ಮಹಾಸಂಗಮ. ಫೆಬ್ರವರಿ 15ರಂದು ಇಡೀ ವಿಶ್ವದ ಕಣ್ಣುಗಳು ಈ ಹೈವೋಲ್ಟೇಜ್ ಪಂದ್ಯದೆಡೆ ನೆಟ್ಟಿರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು