ಭದ್ರಾದ್ರಿ ಕೊತ್ತಗೂಡೆಂ: ಕೇವಲ 90 ರೂಪಾಯಿ ಚಿಲ್ಲರೆ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕ್ಷುಲ್ಲಕ ಜಗಳವೊಂದು ಅಮಾನವೀಯ ದುರಂತದಲ್ಲಿ ಅಂತ್ಯವಾಗಿದೆ. ಪ್ರಯಾಣಿಕೆಯೊಬ್ಬಳು ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ತಳ್ಳಿದ ಪರಿಣಾಮ ಭಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ (TGSRTC) 24ವರ್ಷದ ಮಹಿಳಾ ಕಂಡಕ್ಟರ್, ಚಿಕಿತ್ಸೆ ಫಲಿಸದೇ 10 ದಿನಗಳ ನಂತರ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಮನುಗೂರು ಆಡರ್ಶ್ ನಗರದ ನಿವಾಸಿಯಾಗಿದ್ದ ಗುಂಡ್ಲ ಪ್ರವಳಿಕಾ ಮೃತಪಟ್ಟ ದುರದೃಷ್ಟಕರ ಕಂಡಕ್ಟರ್. ಅಕ್ಟೋಬರ್ 25 ರಂದು ಮನುಗೂರು ಆರ್‌ಟಿಸಿ ಡಿಪೋಗೆ ಸೇರಿದ್ದ ಪ್ರವಳಿಕಾ, ಮನುಗೂರಿನಿಂದ ಭದ್ರಾಚಲಂಗೆ ಚಲಿಸುತ್ತಿದ್ದ ‘ಪಲ್ಲೆ ವೆಲುಗು’ (Palle Velugu) ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಶ್ವಪುರಂ ಮಂಡಲದ ಮಿತ್ತಗೂಡೆಂ ಬಳಿ ಈ ಕೃತ್ಯ ನಡೆದಿದೆ.

ಬಸ್ ಹತ್ತಿದ ಸ್ಥಳೀಯ ನಿವಾಸಿ ಬಾನೋತ್ ಮೌನಿಕಾ ಎಂಬ ಪ್ರಯಾಣಿಕಿ ತನ್ನ ಮಗನ ಟಿಕೆಟ್‌ಗಾಗಿ ಕಂಡಕ್ಟರ್ ಪ್ರವಳಿಕಾಗೆ 100 ರೂಪಾಯಿ ನೋಟು ನೀಡಿದ್ದರು. 10 ರೂಪಾಯಿಯ ಟಿಕೆಟ್ ನೀಡಿದ ಪ್ರವಳಿಕಾ, ಚಿಲ್ಲರೆ ಅಭಾವವಿದ್ದ ಕಾರಣ ಉಳಿದ 90 ರೂಪಾಯಿಯನ್ನು ಟಿಕೆಟ್ ಹಿಂಭಾಗದಲ್ಲಿ ಬರೆದುಕೊಟ್ಟು ನಂತರ ಪಡೆಯುವಂತೆ ತಿಳಿಸಿದ್ದರು.
ಪ್ರಯಾಣಿಕಿ ಮೌನಿಕಾ ಇಳಿಯಬೇಕಾದ ಸ್ಟಾಪ್ ಬರುತ್ತಿದ್ದಂತೆ ಬಾಕಿ ಹಣಕ್ಕಾಗಿ ಕಂಡಕ್ಟರ್ ಜೊತೆ ತೀವ್ರ ಜಗಳ ತೆಗೆದಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿ, ಮೌನಿಕಾ ಚಲಿಸುತ್ತಿದ್ದ ಬಸ್ಸಿನ ಬಾಗಿಲಿನಿಂದ ಕಂಡಕ್ಟರ್ ಪ್ರವಳಿಕಾ ಅವರನ್ನು ಬಲವಂತವಾಗಿ ಹೊರಗೆ ತಳ್ಳಿದ್ದಾರೆ. ರಸ್ತೆಗೆ ಬಿದ್ದ ಪ್ರವಳಿಕಾ ಅವರ ಎರಡೂ ಕಾಲುಗಳ ಮೇಲೆ ಬಸ್ಸಿನ ಹಿಂಬದಿ ಚಕ್ರಗಳು ಹರಿದು ಹೋಗಿದ್ದು, ತೀವ್ರ ಸ್ವರೂಪದ ಗಾಯಗಳಾಗಿದ್ದವು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಭೇಟಿ ಹಾಗೂ ಸ್ಟಿಂಗ್ ಆಪರೇಷನ್ ವಿವಾದ: ರಾಜಕೀಯ ಮಹತ್ವವಿಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ತೀವ್ರ ಗಾಯಗೊಂಡಿದ್ದ ಪ್ರವಳಿಕಾ ಅವರನ್ನು ಮೊದಲು ಭದ್ರಾಚಲಂ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು 10 ದಿನಗಳ ಕಾಲ ಸತತ ಚಿಕಿತ್ಸೆ ನೀಡಿದರೂ ಗಂಭೀರ ಗಾಯಗಳಿಂದಾಗಿ ಪ್ರವಳಿಕಾ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಶ್ವಪುರಂ ಪೊಲೀಸರು, ಆರೋಪಿ ಪ್ರಯಾಣಿಕಿ ಮೌನಿಕಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

