ಬೆಂಗಳೂರು: ರಾಜ್ಯ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಇಂದು ಶಿಷ್ಟಾಚಾರ ಉಲ್ಲಂಘನೆಯ ವಿಷಯ ಭಾರಿ ಚರ್ಚೆಗೆ ಮತ್ತು ಗದ್ದಲಕ್ಕೆ ಕಾರಣವಾಯಿತು. ಚುನಾಯಿತ ಶಾಸಕರನ್ನು ಕಡೆಗಣಿಸಿ, ಪರಾಜಿತ ಅಭ್ಯರ್ಥಿಗಳಿಗೆ ಅಧಿಕಾರಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಾನು ಬಂಟ್ವಾಳದ ಶಾಸಕ ಎಂಬುದು ಅಧಿಕಾರಿಗಳಿಗೆ ಗೊತ್ತೇ ಇಲ್ಲದಂತಿದೆ. ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇನ್ನೂ ಸಚಿವ ಎಂದೇ ಭಾವಿಸಿದ್ದಾರೆ. ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಮತ್ತು ಏಜೆನ್ಸಿಗಳನ್ನು ಗುರುತಿಸಲು ಅಧಿಕಾರಿಗಳು ಪರಾಜಿತ ಅಭ್ಯರ್ಥಿಗೇ ಪತ್ರ ಬರೆಯುತ್ತಿದ್ದಾರೆ,” ಎಂದು ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಂಟ್ವಾಳದ ಸಜಿಪನಡು ಮಸೀದಿ ಬಳಿ ರಣರಂಗ: ತಲವಾರ್, ರಾಡ್ಗಳಿಂದ ಭೀಕರ ಗುಂಪು ಘರ್ಷಣೆ
ಪರಾಜಿತ ಅಭ್ಯರ್ಥಿಗಳ ಶಿಫಾರಸಿನ ಮೇಲೆ ಅಧಿಕಾರಿಗಳು ಹಣ ಮಂಜೂರು ಮಾಡುತ್ತಿದ್ದಾರೆ ಎಂದರೆ ಇದು ಶಿಷ್ಟಾಚಾರದ ಉಲ್ಲಂಘನೆಯಲ್ಲವೇ? ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಪರಾಜಿತ ಅಭ್ಯರ್ಥಿಗಳ ಹೆಸರಿನಲ್ಲಿ ಪತ್ರ ವ್ಯವಹಾರ ಮಾಡುತ್ತಿರುವುದು ಶಾಸಕರ ಹಕ್ಕುಚ್ಯುತಿಯಾಗಿದೆ,” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ಕ್ಷೇತ್ರದಲ್ಲೂ ಪರಾಜಿತ ಅಭ್ಯರ್ಥಿಯ ಪತ್ರದ ಆಧಾರದ ಮೇಲೆ ಹಣ ಬಿಡುಗಡೆಯಾಗುತ್ತಿದೆ. ಚುನಾಯಿತ ಶಾಸಕರಿಗೆ ಬೆಲೆ ಇಲ್ಲದಿದ್ದರೆ ನಾವು ಯಾಕೆ ಇರಬೇಕು?” ಎಂದು ಪ್ರಶ್ನಿಸಿದರು.
ಈ ವಿಷಯವು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಎಲ್ಲ ಕ್ಷೇತ್ರಗಳಲ್ಲೂ ಪರಾಜಿತ ಅಭ್ಯರ್ಥಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ವಿರೋಧ ಪಕ್ಷದ ಶಾಸಕರು ಒಕ್ಕೊರಲಿನಿಂದ ಆರೋಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

