ವಿಜಯನಗರ: ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಸಂಬಂಧ 24 ವರ್ಷದ ಆರೋಪಿಯ ಬಂಧನವಾಗುತ್ತಿದ್ದಂತೆ ಸ್ಫೋಟಕ ವಿಚಾರ ಬಯಲಿಗೆ ಬಂದಿದೆ. ತನ್ನ ತಂಗಿಯ ಪ್ರೇಮ ಪ್ರಕರಣ ಮತ್ತು ಇದರಿಂದಾಗಿ ಆಕೆ ಗರ್ಭಾವತಿಯಾದ ಹಿನ್ನೆಲೆ ಕುಪಿತಗೊಂಡ ಅಣ್ಣ ಅಕ್ಷಯ್, ಸಹೋದರಿಯ ಕಥೆಯನ್ನೇ ಮುಗಿಸಿದ್ದಾನೆ. ಅಷ್ಟು ಮಾತ್ರವಲ್ಲದೆ, ಆಕೆಗೆ ಬೆಂಬಲವಾಗಿ ನಿಂತಿದ್ದ ತಂದೆ ತಾಯಿಯನ್ನೂ ಹತ್ಯೆಗೈದಿರುವ ವಿಚಾರ ಇದೀಗ ಬಯಲಿಗೆ ಬಂದಿದೆ.
ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರಿಗೆ ಇದೊಂದು ಮರ್ಯಾದ ಹತ್ಯೆ ಎಂದು ತಿಳಿದುಬಂದಿದೆ. ಇದು ದ್ವೇಷದ ಹತ್ಯೆಯಲ್ಲ, ಕುಟುಂಬದ ಗೌರವ ಉಳಿಸಲು ಈ ರೀತಿ ಮಾಡಿದ್ದಾಗಿ ಆರೋಪಿ ಅಕ್ಷಯ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

ಅಷ್ಟಕ್ಕೂ ಆಗಿದ್ದೇನು?
19 ವರ್ಷದ ಅಮೃತಾಳ ಮೊಬೈಲ್ ಪರಿಶೀಲಿಸಿದ ಅಕ್ಷಯ್ಗೆ ಆಘಾತ ಎದುರಾಗಿತ್ತು. ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಅನ್ಯ ಸಮುದಾಯದ ಯುವಕನೊಂದಿಗೆ ಲವ್ವಿ ಡವ್ವಿ ನಡೆಯುತ್ತಿರುವ ವಿಚಾರ ತಿಳಿದಾಕ್ಷಣ ಕುಪಿತಗೊಂಡ ಅಕ್ಷಯ್, ಅಮೃತಾಳನ್ನು ಪ್ರಶ್ನಿಸಿದ್ದಾನೆ. ಹಲ್ಲೆಯೂ ನಡೆಸಿದ್ದಾನೆ. ಬಳಿಕ ತಾನು ಇನ್ನು ಮುಂದೆ ಆತನನ್ನು ಪ್ರೀತಿಸಲ್ಲ ಎಂದು ಅಮೃತ ಹೇಳಿದ್ದಾಳೆ. ಹೀಗಾಗಿ ಅಕ್ಷಯ್ ತಣ್ಣಗಾಗಿದ್ದ. ಅಷ್ಟರಲ್ಲಿ ಮತ್ತೋಂದು ಶಾಕಿಂಗ್ ವಿಚಾರ ಅಕ್ಷಯ್ ಕಿವಿಗೆ ಬಿದ್ದಿದೆ.
ಇದನ್ನೂ ಓದಿ: ‘ನಿನ್ನ ಸಹೋದರಿಯನ್ನು ಕೊಲ್ಲುತ್ತಿದ್ದೇನೆ’ : ಕಮಾಂಡೋ ಪತ್ನಿಯ ಕೊಲೆಗೈದ ಪತಿ!
ಅಮೃತಾಳ ಪ್ರೀತಿ ಕೇವಲ ಪ್ರೀತಿಗೆ ಸೀಮಿತವಾಗಿರದೆ ದೈಹಿಕ ಸಂಪರ್ಕ ಬೆಳೆದು ಗರ್ಭಿಣಿಯಾಗಿರುವ ವಿಚಾರ ಇದೇ ವೇಳೆ ತಿಳಿದುಬಂದ ಕೂಡಲೇ ಅಕ್ಷಯ್ನ ಕೋಪ ನೆತ್ತಿಗೇರಿದೆ. ಗರ್ಭಪಾತ ನಡೆಸುವಂತೆ ಅಕ್ಷಯ್ ಒತ್ತಾಯಿಸಿದರೂ ಅಮೃತ ಮಾತ್ರವಲ್ಲದೆ, ತಂದೆ-ತಾಯಿಯೂ ಒಪ್ಪಿರಲಿಲ್ಲ. ತನ್ನ ಮಾತಿಗೆ ಬೆಲೆ ನೀಡದ ಹಿನ್ನೆಲೆ ಆಕ್ರೋಶಗೊಂಡ ಅಕ್ಷಯ್, ಮುಂದೆ ಮಾಡಿದ್ದೇ ಕೊಲೆ ಸಂಚು.
ಕೊಲೆ ಸಂಚಿನಂತೆ ಜ.26 ರಂದು ತನ್ನ ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯನ್ನೇ ಕೊಲೆ ಮಾಡಿ ಸ್ನಾನ ಮಾಡಿದ್ದಾನೆ. ಬಳಿಕ ರಕ್ತಸಿಕ್ತ ಬಟ್ಟೆಗಳನ್ನು ನಾಶ ಮಾಡಿದ್ದಾನೆ. ಹೊರ ಹೋಗಿದ್ದ ಅಮೃತ ಸಂಜೆ ಮನೆಗೆ ವಾಪಸ್ ಆಗುತ್ತಿದ್ದಂತೆ ಆಕೆಯ ಕಥೆಯನ್ನೂ ಮುಗಿಸಿದ್ದಾನೆ. ಬಳಿಕ ಕೊಠಡಿಯೊಂದರಲ್ಲಿ ಇಟ್ಟಿದ್ದ ತಾಯಿಯ ಮೃತದೇಹದ ಬಳಿ ಅಮೃತಾಳ ಮೃತದೇಹವನ್ನೂ ಇರಿಸಿ ಬೀಗ ಹಾಕಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿ ತಂದೆಗಾಗಿ ಕಾಯುತ್ತಿದ್ದನು.
ತಂದೆಯ ಕತ್ತನ್ನೇ ಕೊಯ್ದ ಮಗ
ತಾಯಿ ಮತ್ತು ತಂಗಿಯನ್ನು ಕೊಂದು ಸ್ನಾನ ಮಾಡಿ ಕುಳಿತುಕೊಂಡಿದ್ದ ಅಕ್ಷಯ್ ರಾತ್ರಿ ತಂದೆ ಬರುವುದನ್ನೇ ಕಾಯುತ್ತಿದ್ದನು. ಮದ್ಯ ವ್ಯಸನಿಯಾಗಿದ್ದ ತಂದೆ, ಮದ್ಯ ಸೇವನೆ ಮಾಡಿ ಮನೆಯೊಳಗಿನ ಸೋಫಾದ ಮೇಲೆ ಕುಳಿತಿದ್ದಾರೆ. ಈ ವೇಳೆ ಮಾರಕಾಸ್ತ್ರದೊಂದಿಗೆ ಬಂದ ಮಗ, ತಂದೆಯ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ತಂದೆಯ ಮೃತದೇಹವನ್ನೂ ಅದೇ ಕೊಠಡಿಯಲ್ಲಿ ಇರಿಸಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿದ್ದಾನೆ.
ಕೊಲೆ ನಂತರ ಬೆಂಗಳೂರಿಗೆ ಭೇಟಿ
ತ್ರಿವಳಿ ಕೊಲೆ ಮಾಡಿದ ನಂತರ ರಾತ್ರಿಯೆಲ್ಲಾ ಸಾಕ್ಷಿ ನಾಶಕ್ಕೆ ಯೋಚನೆ ಮಾಡಿದ ಅಕ್ಷಯ್, ಮರುದಿನ ತನ್ನ ಮೊಬೈಲ್ ಮನೆಯಲ್ಲೇ ಬಿಟ್ಟು ತಾಯಿ ಹಾಗೂ ತಂಗಿಯ ಮೊಬೈಲ್ ಹಿಡಿದುಕೊಂಡು ಬೆಂಗಳೂರಿಗೆ ತೆರಳಿದ್ದಾನೆ. ಅಲ್ಲಿ ಜಯದೇವ ಆಸ್ಪತ್ರೆ ಬಳಿ ಫೋಟೋ ಕ್ಲಿಕ್ ಮಾಡಿ ತನ್ನ ಮೊಬೈಲ್ಗೆ ಕಳುಹಿಸಿದ ಬಳಿಕ ಮೊಬೈಲ್ ಅನ್ನು ಡೆಸ್ಟ್ಬಿನ್ಗೆ ಹಾಕಿದ್ದಾನೆ.
ಇದನ್ನೂ ಓದಿ: ದೆಹಲಿಯಲ್ಲಿ 6 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದ ಗ್ಯಾಂಗ್ ರೇಪ್!
ಬಳಿಕ, ಕೃತ್ಯದ ಬಗ್ಗೆ ತನ್ನ ಮಾವನಿಗೆ ತಿಳಿಸಿದ ಅಕ್ಷಯ್ಗೆ ಶವಗಳನ್ನು ಹೂತುಹಾಕಿ ನಾಪತ್ತೆ ನಾಟಕವಾಡುವ ಯೋಜನೆಯನ್ನು ಮಾವನೇ ನೀಡುತ್ತಾನೆ. ಅದರಂತೆ, ಜ.27 ರಂದು ರಾತ್ರಿ ಕೊಟ್ಟೂರಿಗೆ ವಾಪಸ್ ಆದ ಅಕ್ಷಯ್, ಟೈಲ್ಸ್ ಕಟ್ಟರ್ ಹಾಗೂ ಡ್ರಿಲ್ಲಿಂಗ್ ಮೆಷಿನ್ ತಂದು ಹೊಂಡ ತೋಡಿ ಮೂವರ ಶವಗಳನ್ನು ಮಣ್ಣು ಮಾಡಿದ್ದಾನೆ.
ಮಾವನೊಂದಿಗೆ ಠಾಣೆ ಮೆಟ್ಟಿಲೇರಿದ ಅಕ್ಷಯ್
ಜ.28 ರಂದು ತನ್ನ ಮಾವನೊಂದಿಗೆ ತಿಲಕ್ನಗರ ಪೊಲೀಸ್ ಠಾಣೆಗೆ ತೆರಳಿದ ಅಕ್ಷಯ್, ತನ್ನ ತಂದೆ, ತಾಯಿ ಹಾಗೂ ಸಹೋದರಿ ನಾಪತ್ತೆಯಾಗಿದ್ದಾರೆ ಎಂದು ನಾಟಕೀಯ ದೂರನ್ನು ನೀಡುತ್ತಾನೆ. ಹೀಗಾಗಿ ಪೊಲೀಸರು ಅಕ್ಷಯ್ನ ಹೇಳಿಕೆ ಪಡೆಯುವಾಗ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಅನುಮಾನಗೊಂಡ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಈ ವೇಳೆ ತ್ರಿವಳಿ ಕೊಲೆಯ ಸತ್ಯಾಂಶ ಹೊರಬಿದ್ದಿದೆ. ಅದರಂತೆ, ಅಕ್ಷಯ್ ಮತ್ತು ಈತನ ಮಾವ ವಸಂತ್ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

