ವಾಷಿಂಗ್ಟನ್ : ಗ್ರೀನ್ಲ್ಯಾಂಡ್ ಮೇಲೆ ಅಮೆರಿಕ ನಿಯಂತ್ರಣ ಸಾಧಿಸುವುದಕ್ಕೆ ಬೆಂಬಲ ನೀಡದ ದೇಶಗಳ ಮೇಲೆ ತೆರಿಗೆ (ಟ್ಯಾರಿಫ್) ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಈ ಕುರಿತು ವೈಟ್ ಹೌಸ್ನಲ್ಲಿ ಆರೋಗ್ಯ ಸಂಬಂಧಿತ ಕಾರ್ಯಕ್ರಮದ ವೇಳೆ ಮಾತನಾಡಿದ ಟ್ರಂಪ್, ಗ್ರೀನ್ಲ್ಯಾಂಡ್ ನಮ್ಮ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಅಗತ್ಯ. ಈ ವಿಚಾರದಲ್ಲಿ ನಮ್ಮ ಜೊತೆ ನಿಲ್ಲದ ದೇಶಗಳ ಮೇಲೆ ನಾನು ಟ್ಯಾರಿಫ್ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಲಾಗಿದೆ.
ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ಟ್ರಂಪ್ ಬಹಿರಂಗಪಡಿಸಿಲ್ಲ. ಕಳೆದ ಕೆಲವು ತಿಂಗಳಿಂದಲೂ ಗ್ರೀನ್ಲ್ಯಾಂಡ್ ಮೇಲೆ ಅಮೆರಿಕ ನಿಯಂತ್ರಣ ಇರಬೇಕು ಎಂದು ಅವರು ಪುನಃಪುನಃ ಹೇಳುತ್ತಾ ಬಂದಿದ್ದಾರೆ. ಗ್ರೀನ್ಲ್ಯಾಂಡ್ ಡೆನ್ಮಾರ್ಕ್ ಸಾಮ್ರಾಜ್ಯದ ಭಾಗವಾಗಿರುವ ಸ್ವಯಂ ಆಡಳಿತ ಪ್ರದೇಶವಾಗಿದೆ. ವೈಟ್ ಹೌಸ್ “ಎಲ್ಲಾ ಆಯ್ಕೆಗಳು ಮುಕ್ತವಾಗಿವೆ” ಎಂದು ಹೇಳಿದ್ದರೂ, ಈ ವಿಚಾರದಲ್ಲಿ ಬೆಂಬಲ ನೀಡದ ರಾಷ್ಟ್ರಗಳ ವಿರುದ್ಧ ತೆರಿಗೆ ವಿಧಿಸುವ ಬೆದರಿಕೆಯನ್ನು ಟ್ರಂಪ್ ನೀಡಿರುವುದು ಇದೇ ಮೊದಲು ಎಂದು ವರದಿಯಾಗಿದೆ.

ಈ ಬೆಳವಣಿಗೆಗೆ ಒಂದು ದಿನ ಮುನ್ನವೇ ಕೆಲವು ಯುರೋಪಿಯನ್ ರಾಷ್ಟ್ರಗಳು ಗ್ರೀನ್ಲ್ಯಾಂಡ್ಗೆ ಸ್ವಲ್ಪ ಸಂಖ್ಯೆಯ ಸೇನಾ ಪಡೆಗಳನ್ನು ಕಳುಹಿಸಿವೆ. ಈ ಮಧ್ಯೆ, ಡೆನ್ಮಾರ್ಕ್ ಸರ್ಕಾರ ದ್ವೀಪದ ಭದ್ರತೆಗೆ ದೊಡ್ಡ ಮತ್ತು ಶಾಶ್ವತ ನಾಟೋ (NATO) ಪಡೆ ನಿಯೋಜನೆಗೆ ಯೋಜನೆ ರೂಪಿಸುತ್ತಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಈ ಕ್ರಮಗಳು ಡೆನ್ಮಾರ್ಕ್ಗೆ ಸೇನಾ ಅಭ್ಯಾಸಗಳ ಸಿದ್ಧತೆಗೆ ಸಹಕಾರಿಯಾಗಿದ್ದು, ಅಮೆರಿಕ, ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ ಅಧಿಕಾರಿಗಳ ಸಭೆಯ ಬಳಿಕ ನಡೆದಿವೆ ಎಂದು ವರದಿಯಾಗಿದೆ.
ಇದಕ್ಕೂ ನಡುವೆ, ಶುಕ್ರವಾರ ಅಮೆರಿಕದ ಕೆಲವು ಸೆನೆಟರ್ಗಳು ಮತ್ತು ಪ್ರತಿನಿಧಿಗಳು ಡೆನ್ಮಾರ್ಕ್ ಸಂಸತ್ತಿನ ಸದಸ್ಯರನ್ನು ಭೇಟಿಯಾಗಿದ್ದಾರೆ. ಟ್ರಂಪ್ ಅವರ ಯೋಜನೆಗಳ ವಿರುದ್ಧ ಶನಿವಾರ ಡೆನ್ಮಾರ್ಕ್ನಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಬ್ಲೂಮ್ಬರ್ಗ್ ತಿಳಿಸಿದೆ.
ಡೆನ್ಮಾರ್ಕ್ ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೆ ರಾಸ್ಮುಸೆನ್ ಕಳೆದ ಒಂದು ವಾರದಿಂದ ವಾಷಿಂಗ್ಟನ್ನಲ್ಲಿ ಅಮೆರಿಕ ಕಾಂಗ್ರೆಸ್ ಸದಸ್ಯರೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಭೇಟಿಯಾಗಿದ್ದರು.
ಈ ಸಭೆಗಳ ನಂತರ ಮಾತನಾಡಿದ ರಾಸ್ಮುಸೆನ್, ಗ್ರೀನ್ಲ್ಯಾಂಡ್ ವಿಷಯದಲ್ಲಿ ಟ್ರಂಪ್ ಅವರೊಂದಿಗೆ ಮೂಲಭೂತ ಭಿನ್ನಾಭಿಪ್ರಾಯ ಮುಂದುವರೆದಿದೆ ಎಂದು ಹೇಳಿದ್ದಾರೆ. ಆದರೂ, ಉಭಯ ಪಕ್ಷಗಳು ಭಿನ್ನತೆಗಳನ್ನು ಪರಿಹರಿಸುವ ಮಾರ್ಗಗಳ ಕುರಿತು ಚರ್ಚಿಸಲು ಒಂದು ಕಾರ್ಯ ಸಮಿತಿಯನ್ನು ರಚಿಸಲು ಒಪ್ಪಿಕೊಂಡಿವೆ ಎಂದು ವರದಿಯಾಗಿರುತ್ತದೆ.
ಇದನ್ನೂ ಓದಿ : Mumbai : ಮುಂಬೈ ಪಾಲಿಕೆ ಬಿಜೆಪಿ ಮೈತ್ರಿ ತೆಕ್ಕೆಗೆ: ಠಾಕ್ರೆ ಪ್ರಾಬಲ್ಯ ಅಂತ್ಯ, ಕಾಂಗ್ರೆಸ್ಗೆ ಮತ ವಿಭಜನೆಯ ಹೊಡೆತ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

