Breaking News

Russia : ರಷ್ಯಾದಿಂದ ತೈಲ ಖರೀದಿಸಿದರೆ ಶೇ.500 ತೆರಿಗೆ : ಟ್ರಂಪ್ ಬೆದರಿಕೆ

ನವದೆಹಲಿ : ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡಾ 500 ಟ್ಯಾರಿಫ್ (ಆಮದು ಸುಂಕ) ವಿಧಿಸುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸೆನೆಟ್‌ನ ಅನುಮೋದನೆ ಅಗತ್ಯವಿದೆ ಎಂದು ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಆದರೆ,‌ ಈ ಬಾರಿ ಈ ಬೆದರಿಕೆ ಮುಖ್ಯವಾಗಿ ಚೀನಾಗೆ ಉದ್ದೇಶಿತವಾಗಿದ್ದು, ಭಾರತಕ್ಕೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್, ರಷ್ಯಾ ನಿರ್ಬಂಧ ಮಸೂದೆ ಅಡಿಯಲ್ಲಿ ರಷ್ಯನ್ ತೈಲ ಖರೀದಿಸುವ ದೇಶಗಳ ಮೇಲೆ ಕನಿಷ್ಠ 500% ಟ್ಯಾರಿಫ್ ವಿಧಿಸುವ ಅವಕಾಶ ಇದೆ. ಈ ಕುರಿತು ಸೆನೆಟರ್ ಲಿಂಡ್ಸೆ ಗ್ರಾಹಂ ಮಸೂದೆಯನ್ನು ಸೆನೆಟ್ ಮುಂದೆ ಇಟ್ಟಿದ್ದಾರೆ. ಅದು ಅಂಗೀಕಾರವಾಗುತ್ತದೆಯೇ ಎಂಬುದು ಕಾದು ನೋಡಬೇಕು. ಆದರೆ, ಅಧ್ಯಕ್ಷ ಟ್ರಂಪ್ ಅವರಿಗೆ ಅಂತಹ ಅಧಿಕಾರವನ್ನು ನೀಡುವ ಅಗತ್ಯವಿಲ್ಲ, ಅವರು ಈಗಿರುವ ಅಂತಾರಾಷ್ಟ್ರೀಯ ಆರ್ಥಿಕ ತುರ್ತು ಅಧಿಕಾರ ಕಾಯ್ದೆ (IEPA) ಅಡಿಯಲ್ಲಿ ಕೂಡ ಅದನ್ನು ಜಾರಿಗೆ ತರುವ ಸಾಧ್ಯತೆ ಇದೆ. ಆದರೂ ಸೆನೆಟ್ ಅವರು ಈ ಅಧಿಕಾರವನ್ನು ನೀಡಲು ಮುಂದಾಗಿದೆ, ಎಂದು ಹೇಳಿದರು.

Advertisement

ಭಾರತ ರಷ್ಯನ್ ತೈಲ ಖರೀದಿ ನಿಲ್ಲಿಸಿದೆ : ಬೆಸೆಂಟ್

ಭಾರತ ಕುರಿತು ಮಾತನಾಡಿದ ಬೆಸೆಂಟ್, ಉಕ್ರೇನ್–ರಷ್ಯಾ ಯುದ್ಧ ಆರಂಭವಾದ ನಂತರ ಭಾರತ ರಷ್ಯನ್ ತೈಲ ಖರೀದಿಸಲು ಆರಂಭಿಸಿತು. ಆದರೆ, ಟ್ರಂಪ್ ಆಡಳಿತವು ಭಾರತದ ಮೇಲೆ 25% ಟ್ಯಾರಿಫ್ ವಿಧಿಸಿದ ಬಳಿಕ, ಭಾರತ ಕ್ರಮೇಣ ಖರೀದಿಯನ್ನು ಕಡಿಮೆ ಮಾಡಿಕೊಂಡು ಈಗ ರಷ್ಯನ್ ತೈಲ ಖರೀದಿಯನ್ನು ನಿಲ್ಲಿಸಿದೆ ಎಂದು ಹೇಳಿದರು. ಅವರು ಯೂರೋಪ್ ದೇಶಗಳ ಮೇಲೂ ಟೀಕಿಸಿ, ನಾಲ್ಕು ವರ್ಷಗಳ ನಂತರವೂ ಯೂರೋಪ್ ದೇಶಗಳು ರಷ್ಯನ್ ತೈಲ ಖರೀದಿಸುತ್ತಿವೆ. ಇದರಿಂದ ಅವರು ತಮ್ಮದೇ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದ್ದಾರೆ, ಎಂದು ಆರೋಪಿಸಿದರು.

ರಷ್ಯನ್ ತೈಲದ ಪ್ರಮುಖ ಖರೀದಿದಾರ ರಾಷ್ಟ್ರಗಳಲ್ಲಿ ಒಂದಾದ ಚೀನಾವನ್ನು ಗುರಿಯಾಗಿಸಿಕೊಂಡು ಅಮೆರಿಕ ಬಹುಕಾಲದಿಂದ 500% ವರೆಗೆ ಟ್ಯಾರಿಫ್ ವಿಧಿಸುವ ಯೋಜನೆ ಹೊಂದಿದೆ ಎಂದು ಬೆಸೆಂಟ್ ಹೇಳಿದರು. ಈ ತಿಂಗಳ ಆರಂಭದಲ್ಲಿ ಸೆನೆಟರ್ ಲಿಂಡ್ಸೆ ಗ್ರಾಹಂ ಮಸೂದೆ ವಿವರಗಳನ್ನು ಬಹಿರಂಗಪಡಿಸಿ, ಈ ಕಾನೂನು ಚೀನಾ, ಭಾರತ ಮತ್ತು ಬ್ರೆಜಿಲ್ ಮೊದಲಾದ ದೇಶಗಳು ಕಡಿಮೆ ಬೆಲೆಯ ರಷ್ಯನ್ ತೈಲ ಖರೀದಿಸುವುದನ್ನು ನಿಲ್ಲಿಸಲು ಒತ್ತಡ ಹೇರುವ ಮೂಲಕ ಅಧ್ಯಕ್ಷ ಟ್ರಂಪ್ ಅವರಿಗೆ ಅಪಾರ ಶಕ್ತಿ ನೀಡುತ್ತದೆ. ಆ ಹಣವೇ ಉಕ್ರೇನ್ ವಿರುದ್ಧ ಪುಟಿನ್ ನಡೆಸುತ್ತಿರುವ ರಕ್ತಪಾತದ ಯುದ್ಧಕ್ಕೆ ಇಂಧನವಾಗುತ್ತಿದೆ ಎಂದು ಹೇಳಿದ್ದರು. ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ಬೆಸೆಂಟ್, 85 ಅಮೆರಿಕನ್ ಸೆನೆಟರ್‌ಗಳು ಚೀನಾದ ಮೇಲೆ ರಷ್ಯನ್ ತೈಲ ಖರೀದಿಗೆ ಸಂಬಂಧಿಸಿದಂತೆ 500% ಟ್ಯಾರಿಫ್ ವಿಧಿಸಲು ಟ್ರಂಪ್ ಅವರಿಗೆ ಅಧಿಕಾರ ನೀಡಲು ಸಿದ್ಧರಾಗಿದ್ದಾರೆ ಎಂದೂ ಹೇಳಿದ್ದರು.

500% ಟ್ಯಾರಿಫ್ ಮಸೂದೆ ಕುರಿತು ಭಾರತದ ನಿಲುವು ;

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪ್ರಸ್ತಾವಿತ ಮಸೂದೆ ಕುರಿತು ಭಾರತ ಸಂಪೂರ್ಣವಾಗಿ ಅರಿವಿದೆ ಎಂದು ಹೇಳಿದೆ. “ಈ ಮಸೂದೆ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಅದರೊಂದಿಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನು ನಾವು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ,” ಎಂದು MEA ವಕ್ತಾರ ರಂಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಇಂಧನ ಖರೀದಿ ವಿಷಯದಲ್ಲಿ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿ, ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿ ಮತ್ತು ಲಭ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸುತ್ತದೆ, ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Chikkamagalur : ಮದುವೆಗೂ ಮುನ್ನ ತಾಯಿಯಾದ ಮೊಮ್ಮಗಳು: ಶಿಶುವಿನ ಕತ್ತು ಹಿಸುಕಿದ ಅಜ್ಜಿ!

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು