ತಂಜಾವೂರು : ನಟಿ ತ್ರಿಷಾ ಕೃಷ್ಣನ್ ಅವರ ಕುರಿತು ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ (Double Meaning) ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ (DMK) ಪ್ರಮುಖ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ಹಂಚಿಕೆ ಪ್ರತಿಭಟನೆಯಲ್ಲಿ ಈ ಘಟನೆ ಸಂಭವಿಸಿದೆ.
ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ತಂಜಾವೂರಿನಲ್ಲಿ ಡಿಎಂಕೆ ಆಯೋಜಿಸಿದ್ದ ರೈತರ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ (TVK) ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದರು.
ಉದಯನಿಧಿ ಮಾತನಾಡುತ್ತಿದ್ದಾಗ ಸಭೆಯಲ್ಲಿದ್ದ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಜೋರಾಗಿ ಕೂಗಲು ಪ್ರಾರಂಭಿಸಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಉದಯನಿಧಿ, “ನೀರು ಎಲ್ಲಿಗೆ ತಲುಪುತ್ತದೋ ಇಲ್ಲವೋ, ಅಲ್ಲಿಗೆ ತಲುಪಲೇಬೇಕು… ನಾನು ಹೇಳಿದ್ದು ಕಾವೇರಿ ನೀರನ್ನು” ಎಂದು ದ್ವಂದ್ವಾರ್ಥ ನೀಡುವ ರೀತಿಯಲ್ಲಿ ಮಾತನಾಡಿದ್ದರು.
ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಮಹಿಳೆಯರನ್ನು ಅಪಮಾನಿಸಲಾಗಿದೆ ಎಂದು ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಾಗ ವೆಟ್ರಿ ಕಳಗಂ’ (TVK) ಪಕ್ಷವು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಉದಯನಿಧಿ ವಿರುದ್ಧ ತಂಜಾವೂರು ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಅಧಿಕೃತ ದೂರು ನೀಡಿತು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಂಡಾಯದ ಕಿಡಿ: ಸಾಲು ಸಾಲು ರಾಜೀನಾಮೆಗೆ ಮುಂದಾದ ಶಾಸಕರು
ದೂರಿನ ಆಧಾರದ ಮೇಲೆ ತಂಜಾವೂರು ಪೊಲೀಸರು ಎಫ್ಐಆರ್ (FIR) ದಾಖಲಿಸಿಕೊಂಡು, ಆಗಸ್ಟ್ 4 ರಂದು ಚೆನ್ನೈನ ನೀಲಂಗರೈನಲ್ಲಿರುವ ಉದಯನಿಧಿ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಡಿಎಂಕೆ ಕಾರ್ಯಕರ್ತರು ಈ ಬಂಧನವನ್ನು ಖಂಡಿಸಿ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

