ಬೆಂಗಳೂರು: ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವು ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟು ತನ್ನನ್ನು ರಿಟೇನ್ ಮಾಡಿಕೊಂಡಿದ್ದಕ್ಕೆ ಕೆಕೆಆರ್ ಅಭಿಮಾನಿಗಳಿಂದ ತಾನು ಎದುರಿಸಿದ ಹಾಗೂ ಇಂದಿಗೂ ಎದುರಿಸುತ್ತಿರುವ ಆನ್ಲೈನ್ ನಿಂದನೆಗಳು ಮತ್ತು ಟ್ರೋಲ್ಗಳ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ ವೆಂಕಟೇಶ್ ಅಯ್ಯರ್ (Venkatesh Iyer) ಮುಕ್ತವಾಗಿ ಮಾತನಾಡಿದ್ದಾರೆ. ಪಾಡ್ಕಾಸ್ಟ್ ಒಂದರ ಟೀಸರ್ನಲ್ಲಿ ಅವರು ಈ ಕುರಿತು ಆಘಾತಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
“ಗಿಲ್ ಶತಕ ಬಾರಿಸಿದರೆ ಸಾಕು ನನ್ನನ್ನು ಟಾರ್ಗೆಟ್ ಮಾಡುತ್ತಾರೆ!”: ವೆಂಕಟೇಶ್ ಅಯ್ಯರ್
2022ರ ಐಪಿಎಲ್ ಹರಾಜಿಗೂ ಮುನ್ನ ಕೆಕೆಆರ್ ತಂಡವು ಶುಭ್ಮನ್ ಗಿಲ್ ಅವರನ್ನು ಬಿಡುಗಡೆ ಮಾಡಿ, ವೆಂಕಟೇಶ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿತ್ತು. ಗಿಲ್ ಬಳಿಕ ಗುಜರಾತ್ ಟೈಟಾನ್ಸ್ (GT) ಸೇರಿ ಭರ್ಜರಿ ಪ್ರದರ್ಶನ ನೀಡಿದರು. ಈ ಬಗ್ಗೆ ಮಾತನಾಡಿರುವ ವೆಂಕಟೇಶ್, “ಶುಭ್ಮನ್ ಗಿಲ್ ಯಾವತ್ತಾದರೂ ಶತಕ ಬಾರಿಸಿದರೆ ಸಾಕು, ಸೋಷಿಯಲ್ ಮೀಡಿಯಾದಲ್ಲಿ ಕೆಕೆಆರ್ ಅಭಿಮಾನಿಗಳು ಇಂದಿಗೂ ನನ್ನನ್ನು ಗುರಿಯಾಗಿಸಿ ನಿಂದಿಸುತ್ತಾರೆ ಮತ್ತು ಟ್ರೋಲ್ ಮಾಡುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಶಾ ರೂಖ್ ಸರ್ ಬಳಿಯೂ ಮಾತನಾಡಿದ್ದೆ”: ಐಪಿಎಲ್ ಹರಾಜಿನ ಹಿಂದಿನ ಕಥೆ
2026ರ ಐಪಿಎಲ್ ಹರಾಜಿಗೂ ಮುನ್ನ ಕೆಕೆಆರ್ ಫ್ರಾಂಚೈಸಿಯು ತನ್ನನ್ನು ಬಿಡುಗಡೆ ಮಾಡಿದ್ದರ ಬಗ್ಗೆಯೂ ವೆಂಕಟೇಶ್ ಅಯ್ಯರ್ ಮಾತನಾಡಿದ್ದಾರೆ. ತಂಡದಿಂದ ಹೊರನಡೆಯುವ ನಿರ್ಧಾರದ ಬಗ್ಗೆ ಕೆಕೆಆರ್ ಸಹ-ಮಾಲೀಕ ಹಾಗೂ ಬಾಲಿವುಡ್ ಸೂಪರ್ಸ್ಟಾರ್ ಶಾ ರೂಖ್ ಖಾನ್ ಅವರ ಬಳಿ ತೆರಳಿ ತಮ್ಮ ನಿರ್ಧಾರ ಬದಲಿಸುವಂತೆ ಮನವಿ ಮಾಡಿಕೊಳ್ಳಲು ಯೋಚಿಸಿದ್ದೆ ಎಂದು ಅವರು ತಿಳಿಸಿದ್ದಾರೆ. “ನಾನು ನನ್ನ ಬಳಿ ಕರವಸ್ತ್ರವಿಟ್ಟುಕೊಂಡು ಅಳಲು ಸಿದ್ಧನಾಗಿದ್ದೆ. ಈ ಬಗ್ಗೆ ಸ್ವತಃ ಶಾ ರೂಖ್ ಸರ್ ಅವರ ಬಳಿಯೂ ಮಾತನಾಡಿದ್ದೆ” ಎಂದು ವೆಂಕಟೇಶ್ ಅಯ್ಯರ್ ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ: ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಉಡೀಸ್

ಆರ್ಸಿಬಿ ಸೇರಿದ ವೆಂಕಟೇಶ್ ಅಯ್ಯರ್; ಸಂಭಾವನೆ ಕಡಿತದ ಬಗ್ಗೆಯೂ ಮಾತು
2025ರ ಹರಾಜಿನಲ್ಲಿ ಬರೋಬ್ಬರಿ ₹23.75 ಕೋಟಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ಖರೀದಿಸಿತ್ತು. ಆದರೆ 2026ರ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅಂತಿಮವಾಗಿ ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅವರನ್ನು ತನ್ನ ತೆಕ್ಕೆಗೆV ಸೇರಿಸಿಕೊಂಡಿದೆ. ಹರಾಜಿನ ವೇಳೆ ಸಂಭಾವನೆ ಕಡಿತ (Pay cut) ಆಗುವ ಸಾಧ್ಯತೆಯ ಬಗ್ಗೆ ಮಾತನಾಡಿದ ಅವರು, “ನಾನು ಸಂಭಾವನೆ ಕಡಿತದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನಾನು ಈಗಾಗಲೇ ಅದನ್ನೆಲ್ಲಾ ಮನಸ್ಸಿನಿಂದ ಒಪ್ಪಿಕೊಂಡಿದ್ದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


