ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ವರದಿಯಾದ ನಿಪಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಉಂಟಾಗಿದ್ದ ಆತಂಕದ ನಡುವೆ, ಭಾರತ ಸರ್ಕಾರ ಸೋಂಕು ನಿಯಂತ್ರಣದಲ್ಲಿದೆ ಎಂದು ಘೋಷಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಡರಾತ್ರಿ ಪ್ರಕಟಣೆ ನೀಡಿ, ರಾಜ್ಯದಲ್ಲಿ ಎರಡು ಪ್ರಕರಣಗಳು ದೃಢಪಟ್ಟಿದ್ದು, ಸಮಯೋಚಿತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಅಗತ್ಯವಿರುವ ಎಲ್ಲಾ ಸಾರ್ವಜನಿಕ ಆರೋಗ್ಯ ಕ್ರಮಗಳು ಜಾರಿಯಲ್ಲಿವೆ. ಹೆಚ್ಚುವರಿ ನಿಗಾ, ಪ್ರಯೋಗಾಲಯ ಪರೀಕ್ಷೆಗಳು ಮತ್ತು ಸ್ಥಳೀಯ ಮಟ್ಟದ ತನಿಖೆಗಳನ್ನು ಕೈಗೊಳ್ಳಲಾಗಿದೆ, ಎಂದು ಸಚಿವಾಲಯ ಹೇಳಿದೆ. ನಿಫಾ ವೈರಸ್ ಒಂದು ಜೂನೋಟಿಕ್ ವೈರಸ್ ಆಗಿದ್ದು, ಮೊದಲ ಬಾರಿಗೆ 1990ರ ದಶಕದಲ್ಲಿ ಮಲೇಷ್ಯಾದಲ್ಲಿ ಪತ್ತೆಯಾಯಿತು. ಇದು ಹಣ್ಣು ತಿನ್ನುವ ಬಾವಲಿಗಳು, ಹಂದಿಗಳು ಹಾಗೂ ಮಾನವ ಸಂಪರ್ಕದ ಮೂಲಕ ಹರಡುತ್ತದೆ. ಈ ವೈರಸ್‌ಗೆ ಇಂದಿಗೂ ಲಸಿಕೆ ಲಭ್ಯವಿಲ್ಲ. ಜ್ವರ, ವಾಂತಿ, ಸೆಳೆತ (ಕಂಪನ) ಸೇರಿದಂತೆ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ : ಮುಡಾ ಕೇಸ್: ಸಿಎಂ ಸಿದ್ದರಾಮಯ್ಯಗೆ ಗುಡ್ ನ್ಯೂಸ್
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನಿಫಾ ವೈರಸ್‌ನ ಸಾವಿನ ಪ್ರಮಾಣ ಶೇ.40ರಿಂದ ಶೇ.75ರವರೆಗೆ ಇರಬಹುದು. ಇದು ಕೊರೊನಾ ವೈರಸ್‌ಗಿಂತಲೂ ಹೆಚ್ಚು ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಏಷ್ಯಾದ ಹಲವು ದೇಶಗಳು ಭಾರತದಿಂದ ಆಗಮಿಸುವ ಪ್ರಯಾಣಿಕರ ಮೇಲೆ ತಪಾಸಣೆಯನ್ನು ಹೆಚ್ಚಿಸಿವೆ. ಚೀನಾ ತನ್ನ ಗಡಿ ಪ್ರದೇಶಗಳಲ್ಲಿ ರೋಗ ನಿರೋಧಕ ಕ್ರಮಗಳನ್ನು ಬಲಪಡಿಸಿದ್ದು, ವೈದ್ಯಕೀಯ ಸಿಬ್ಬಂದಿಗೆ ವಿಶೇಷ ತರಬೇತಿ ಮತ್ತು ಅಪಾಯ ಮೌಲ್ಯಮಾಪನ ಆರಂಭಿಸಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಮಾನವರಲ್ಲಿ ಮೊದಲ ನಿಫಾ ಸೋಂಕು 1998ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ದಾಖಲಾಗಿದ್ದು, ಹಂದಿ ಸಾಕಾಣಿಕೆದಾರರು ಮತ್ತು ಮಾಂಸ ವ್ಯಾಪಾರಿಗಳು ಸೋಂಕಿತ ಹಂದಿಗಳಿಂದ ವೈರಸ್‌ಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅದರ ಬಳಿಕ ಬಾಂಗ್ಲಾದೇಶ, ಫಿಲಿಪೈನ್ಸ್ ಮತ್ತು ಭಾರತದಲ್ಲಿ ಸಾಂದರ್ಭಿಕವಾಗಿ ನಿಫಾ ಪ್ರಕರಣಗಳು ವರದಿಯಾಗಿವೆ. ವಿಶೇಷವಾಗಿ ಕೇರಳ ರಾಜ್ಯದಲ್ಲಿ 2018ರಿಂದ ಪ್ರತಿವರ್ಷವೂ ನಿಫಾ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

