IPL: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಭಾರತ ಕಟುವಾಗಿ ಖಂಡಿಸುತ್ತಿದ್ದು, ಭಾರತೀಯರು ಬಾಯ್ಕಾಟ್ ಅಭಿಯಾನವನ್ನೂ ಶುರುಮಾಡಿದ್ದಾರೆ. ಈ ನಡುವೆ ಐಪಿಎಲ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಲ್ಲಿ ಆಡಿಸಬಾರದೆಂಬ ಆಗ್ರಹಗಳು ಕೇಳಿಬರುತ್ತಿವೆ. ಈ ಬಗ್ಗೆ ಬಿಸಿಸಿಐ ಮೌನ ಮುರಿದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬಾಂಗ್ಲಾದೇಶ ಆಟಗಾರರ ಭಾಗವಹಿಸುವಿಕೆಯ ಬಗ್ಗೆ ಪ್ರತಿಕ್ರಿಯಿಸಲು ಬಿಸಿಸಿಐ ಗುರುವಾರ ನಿರಾಕರಿಸಿದೆ. ಈ ವಿಷಯದ ಬಗ್ಗೆ ಸರ್ಕಾರದಿಂದ ಯಾವುದೇ ಸಂವಹನ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ನಡೆದ ಮಿನಿ-ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 9.20 ಕೋಟಿ ರೂ.ಗೆ ರೆಹಮಾನ್ ಅವರನ್ನು ಖರೀದಿಸಿತ್ತು. ಅಲ್ಲದೆ, ಅವರು ಅತ್ಯಂತ ದುಬಾರಿ ಬಾಂಗ್ಲಾದೇಶದ ಆಟಗಾರ ಎಂದೆನಿಸಿಕೊಂಡರು. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾತ್ಮಕ ಘಟನೆಗಳ ವರದಿಗಳ ನಂತರ ಭಾರತದ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ 2026 ರಲ್ಲಿ ರೆಹಮಾನ್ ಭಾಗವಹಿಸುವಿಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.
“ಸರ್ಕಾರದ ಸೂಚನೆಯನ್ನು ಬಿಸಿಸಿಐ ಪಾಲನೆ ಮಾಡುತ್ತದೆ. ರೆಹಮಾನ್ ಪಾಲ್ಗೊಳ್ಳುವಿಕೆಯ ಬಗ್ಗೆ ಸರ್ಕಾರದ ನಿರ್ದೇಶನಗಳಿಗಾಗಿ ಕಾಯುತ್ತೇವೆ” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ಎನ್ಡಿಟಿವಿ ವರದಿ ಮಾಡಿದೆ.
ಬಾಂಗ್ಲಾದೇಶ ಆಟಗಾರರನ್ನು ಪಾಲ್ಗೊಳ್ಳದಂತೆ ತಡೆಯಲು ಸರ್ಕಾರ ಇನ್ನೂ ಯಾವುದೇ ಸೂಚನೆ ಹೊರಡಿಸಿಲ್ಲ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆ ಐಎಎನ್ಎಸ್ಗೆ ತಿಳಿಸಿದೆ.
60 ಐಪಿಎಲ್ ಪಂದ್ಯಗಳಲ್ಲಿ 8.13 ರ ಎಕಾನಮಿ ರೇಟ್ನಲ್ಲಿ 65 ವಿಕೆಟ್ಗಳನ್ನು ಕಬಳಿಸಿರುವ ರೆಹಮಾನ್, 2016 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಮೂಲಕ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಮುಂಬೈ ಇಂಡಿಯನ್ಸ್ (2018), ರಾಜಸ್ಥಾನ್ ರಾಯಲ್ಸ್ (2021), ಡೆಲ್ಲಿ ಕ್ಯಾಪಿಟಲ್ಸ್ (2022-23) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (2024) ತಂಡಗಳಲ್ಲಿ ಆಡಿದ್ದರು. ಕಳೆದ ಸೀಸನ್ನಲ್ಲಿ ಗಾಯಾಳುವಾಗಿದ್ದ ಆಸ್ಟ್ರೇಲಿಯಾದ ಬ್ಯಾಟರ್ ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರ ಬದಲಿಗೆ ರೆಹಮಾನ್ ಡೆಲ್ಲಿ ಕ್ಯಾಪಿಟಲ್ಸ್ಗೆ ಮರಳಿದರು.
ಕೆಕೆಆರ್ ಮತ್ತು ಅದರ ಸಹ-ಮಾಲೀಕ ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ತಂಡಕ್ಕೆ ರೆಹಮಾನ್ ಅವರನ್ನು ಸೇರಿಸಿಕೊಂಡಿರುವ ಬಗ್ಗೆ ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆರೆಯ ದೇಶದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯದ ವರದಿಗಳ ನಡುವೆ ಬಾಂಗ್ಲಾದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿರುವುದರಿಂದ ಹಿಂದೂಗಳು ಮತ್ತು ಸನಾತನ ಧರ್ಮದ ಅನುಯಾಯಿಗಳಿಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದು, ಅನೇಕರು ಕ್ರೀಡೆಗಳು ರಾಜಕೀಯ ಮತ್ತು ರಾಜತಾಂತ್ರಿಕ ವಿಷಯಗಳಿಂದ ಪ್ರತ್ಯೇಕವಾಗಿ ಉಳಿಯಬೇಕು ಎಂದು ಹೇಳಿದ್ದಾರೆ.

