ಮುಂಬೈ: ತನ್ನ ಪ್ರೀತಿಪಾತ್ರರೊಂದಿಗೆ ಹೊಸ ವರ್ಷವನ್ನು ಆಚರಿಸಲು ಮತ್ತು ಸ್ವಾಗತಿಸಲು ಎಲ್ಲರೂ ಹಾತೊರೆಯುತ್ತಾರೆ. ಅದೇ ರೀತಿ ಮುಂಬೈನಲ್ಲಿ ಹೊಸ ವರ್ಷದ ಪ್ರಯುಕ್ತ ತನ್ನ ಸ್ವೀಟಿ ಸ್ವೀಟ್ ನೀಡಲು ಕರೆದಳೆಂದು ಹೋದ ಪ್ರಿಯಕರ ತನ್ನ ಗುಪ್ತಾಂಗವನ್ನೇ ಕಳೆದುಕೊಂಡ ಬಗ್ಗೆ ವರದಿಯಾಗಿದೆ.
25 ವರ್ಷದ ವಿವಾಹಿತ ಮಹಿಳೆಯೊಬ್ಬರು ತನ್ನ 44 ವರ್ಷದ ವಿವಾಹಿತ ಪ್ರೇಮಿಯನ್ನು ಹೊಸ ವರ್ಷದ ಸಿಹಿತಿಂಡಿಗಳನ್ನು ನೀಡಲು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಹೀಗೆ ಪ್ರಿಯಕರನ್ನು ಕರೆಸಿಕೊಂಡಾಕೆ, ಚಾಕುವಿನಿಂದ ಆತನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ. ಘಟನೆ ನಂತರ ಮಹಿಳೆ ಪರಾರಿಯಾಗಿದ್ದು, ಪ್ರಿಯಕರ ಮುಂಬೈನ ಸಿಯಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಹಿಳೆಯು ಬಲಿಪಶುವಿನ ಸಹೋದರಿಯ ಅತ್ತಿಗೆಯಾಗಿದ್ದು, ಇಬ್ಬರು ಕಳೆದ ಏಳು ವರ್ಷಗಳಿಂದ ಸಂಬಂಧ ಹೊಂದಿರುವ ಅಂಶ ತಿಳಿದುಬಂದಿದೆ.
ತನ್ನ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಪ್ರಿಯಕರನನ್ನು ಪದೇ ಪದೇ ಒತ್ತಾಯಿಸುತ್ತಿದ್ದಳು. ಇದು ಅವರ ನಡುವೆ ಆಗಾಗ್ಗೆ ಜಗಳಗಳಿಗೆ ಕಾರಣವಾಗುತ್ತಿತ್ತು. ಕಳೆದ 18 ವರ್ಷಗಳಿಂದ ಸಾಂತಾ ಕ್ರೂಜ್ ಪೂರ್ವದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಬಲಿಪಶು 2025 ರ ನವೆಂಬರ್‌ನಲ್ಲಿ ಬಿಹಾರಕ್ಕೆ ಹೋಗಿದ್ದ. ಅವನು ಅಲ್ಲಿದ್ದಾಗಲೂ, ಆರೋಪಿ ಮಹಿಳೆ ಫೋನ್ ಕರೆಗಳ ಮೂಲಕ ಅವನಿಗೆ ಬೆದರಿಕೆ ಹಾಕುತ್ತಲೇ ಇದ್ದಳು ಎಂದು ವರದಿಯಾಗಿದೆ.
ಡಿಸೆಂಬರ್ 19 ರಂದು ಮುಂಬೈಗೆ ಹಿಂದಿರುಗಿದ ನಂತರ, ಆತ ಮಹಿಳೆ ಸಂಪರ್ಕಕ್ಕೆ ಸಿಗದೆ ದೂರ ಉಳಿದಿದ್ದ. ಡಿಸೆಂಬರ್ 31 ರಂದು, ಬೆಳಗಿನ ಜಾವ 1:30 ರ ಸುಮಾರಿಗೆ, ಹೊಸ ವರ್ಷದ ಸಿಹಿತಿಂಡಿಗಳನ್ನು ನೀಡುವ ನೆಪದಲ್ಲಿ ಮಹಿಳೆ ಪ್ರಿಯಕರನನ್ನು ತನ್ನ ಮನೆಗೆ ಆಹ್ವಾನಿಸಿದಳು. ಮಹಿಳೆಯ ಮಕ್ಕಳು ನಿದ್ದೆಗೆ ಜಾರಿದ್ದ ವೇಳೆಯಲ್ಲಿ ಮನೆಗೆ ಎಂಟ್ರಿ ಕೊಟ್ಟ ಪ್ರಿಯಕರನೊಂದಿಗೆ ಕೊಂಚ ಮಾತನಾಡಿದ ಮಹಿಳೆ, ಬಳಿಕ ನಡೆದ ಬೆಳವಣಿಗೆಯಲ್ಲಿ ಆತನ ಗುಪ್ತಾಂಗವನ್ನು ಕಟ್ ಮಾಡಿದ್ದಾಳೆ.
ತೀವ್ರವಾದ ರಕ್ತಸ್ರಾವದ ನಡುವೆ ಮನೆಗೆ ಹಿಂದಿರುಗಿದ ಆತನನ್ನ, ಮಕ್ಕಳು ಮತ್ತು ಸ್ನೇಹಿತರು ವಿಎನ್ ದೇಸಾಯಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಿಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯತೆಯ ಬಗ್ಗೆ ವೈದ್ಯರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮಹಿಳೆ ಬಂಧನಕ್ಕೆ ಶೋಧಕಾರ್ಯ ಆರಂಭಿಸಿದ್ದಾರೆ.

