ನವದೆಹಲಿ: ಜಾಗತಿಕ ಪ್ರಯಾಣ ಮತ್ತು ವಾಣಿಜ್ಯ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿರುವ ನಡುವೆಯೇ, 2026ರ Henley Passport Index ವರದಿ ಪ್ರಕಟವಾಗಿದ್ದು, ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಸಿಂಗಾಪೂರ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಭಾರತ 80ನೇ ಸ್ಥಾನದಲ್ಲಿ ಸ್ಥಾನ ಪಡೆದಿರುತ್ತದೆ.
ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಪ್ರಕಾರ, ಪಾಸ್‌ಪೋರ್ಟ್ ಬಲವನ್ನು ವೀಸಾ ಇಲ್ಲದೆ ಅಥವಾ ವೀಸಾ-ಆನ್-ಅರೈವಲ್ / ಇಟಿಎ ಮೂಲಕ ಪ್ರವೇಶಿಸಬಹುದಾದ ದೇಶಗಳ ಸಂಖ್ಯೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಈ ಸೂಚ್ಯಂಕವು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ ದತ್ತಾಂಶವನ್ನು ಆಧರಿಸಿರುತ್ತದೆ.

ಸಿಂಗಪುರ್ ಮತ್ತೆ ಮೊದಲ ಸ್ಥಾನ ;
ಸಿಂಗಪುರ್ ಸತತ ಮೂರನೇ ವರ್ಷವೂ ಮೊದಲ ಸ್ಥಾನದಲ್ಲಿದ್ದು, ಅದರ ನಾಗರಿಕರು 192 ದೇಶಗಳಿಗೆ ವೀಸಾ ರಹಿತ ಪ್ರವೇಶ ಪಡೆಯಬಹುದು. ಬಲವಾದ ರಾಜತಾಂತ್ರಿಕ ಸಂಬಂಧಗಳು, ರಾಜಕೀಯ ಸ್ಥಿರತೆ ಮತ್ತು ಜಾಗತಿಕ ಮಟ್ಟದ ನಂಬಿಕೆ ಈ ಸಾಧನೆಗೆ ಪ್ರಮುಖ ಕಾರಣಗಳೆಂದು ವರದಿಯಲ್ಲಿ ಹೇಳಲಾಗಿದೆ.
ಎರಡನೇ ಸ್ಥಾನವನ್ನು ಜಪಾನ್ ಮತ್ತು ದಕ್ಷಿಣ ಕೊರಿಯಾ ಹಂಚಿಕೊಂಡಿದ್ದು, ಇವರ ಪಾಸ್‌ಪೋರ್ಟ್‌ಗಳು 188 ದೇಶಗಳಿಗೆ ವೀಸಾ ರಹಿತ ಪ್ರವೇಶ ನೀಡುತ್ತವೆ.
ಮೂರನೇ ಸ್ಥಾನದಲ್ಲಿ ಡೆನ್ಮಾರ್ಕ್, ಲಕ್ಸಂಬರ್ಗ್, ಸ್ಪೇನ್, ಸ್ವೀಡನ್ ಮತ್ತು ಸ್ವಿಟ್ಜರ್ಲ್ಯಾಂಡ್ (186 ದೇಶಗಳು) ಇದ್ದರೆ, ನಾಲ್ಕನೇ ಸ್ಥಾನವನ್ನು ಆಸ್ಟ್ರಿಯಾ, ಬೆಲ್ಜಿಯಂ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲೆಂಡ್, ಇಟಲಿ, ನೆದರ್‌ಲ್ಯಾಂಡ್ಸ್ ಮತ್ತು ನಾರ್ವೆ (185 ದೇಶಗಳು) ಹಂಚಿಕೊಂಡಿವೆ.
ಐದನೇ ಸ್ಥಾನದಲ್ಲಿ ಹಂಗೇರಿ, ಪೋರ್ಚುಗಲ್, ಸ್ಲೊವಾಕಿಯಾ, ಸ್ಲೊವೇನಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (184 ದೇಶಗಳು) ಇದ್ದು, ಯುಎಇ ಕಳೆದ ಎರಡು ದಶಕಗಳಲ್ಲಿ ಅತ್ಯಂತ ವೇಗವಾಗಿ ಮೇಲಕ್ಕೆ ಏರಿದ ದೇಶಗಳಲ್ಲಿ ಒಂದಾಗಿದೆ ಎಂದು ವರದಿ ತಿಳಿಸಿದೆ.
ಆರನೇ ಸ್ಥಾನವನ್ನು ಕ್ರೊಯೇಶಿಯಾ, ಚೆಕ್ ಗಣರಾಜ್ಯ, ಎಸ್ಟೋನಿಯಾ, ಮಾಲ್ಟಾ, ನ್ಯೂಜಿಲೆಂಡ್ ಮತ್ತು ಪೋಲ್ಯಾಂಡ್ (183 ದೇಶಗಳು) ಪಡೆದಿವೆ.
ಏಳನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, ಲಾಟ್ವಿಯಾ, ಲಿಚೆನ್‌ಸ್ಟೈನ್ ಮತ್ತು ಯುನೈಟೆಡ್ ಕಿಂಗ್‌ಡಮ್ (182 ದೇಶಗಳು) ಇದ್ದರೆ, ಎಂಟನೇ ಸ್ಥಾನದಲ್ಲಿ ಕೆನಡಾ, ಐಸ್‌ಲ್ಯಾಂಡ್ ಮತ್ತು ಲಿಥುವೇನಿಯಾ (181 ದೇಶಗಳು) ಸ್ಥಾನ ಪಡೆದಿವೆ.
ಒಂಬತ್ತನೇ ಸ್ಥಾನದಲ್ಲಿ ಮಲೇಶಿಯಾ (180 ದೇಶಗಳು) ಇದ್ದು, ಏಷ್ಯಾದಲ್ಲಿನ ಅತ್ಯಂತ ಬಲವಾದ ಪಾಸ್‌ಪೋರ್ಟ್‌ಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ 10ನೇ ಸ್ಥಾನದಲ್ಲಿದ್ದು, ಅದರ ನಾಗರಿಕರು 179 ದೇಶಗಳಿಗೆ ವೀಸಾ ರಹಿತ ಪ್ರವೇಶ ಪಡೆಯಬಹುದು. ಕೆಲ ವರ್ಷಗಳ ಹಿಂದೆ ಅಗ್ರ ಸ್ಥಾನದಲ್ಲಿದ್ದ ಅಮೆರಿಕಾ ಇದೀಗ ಟಾಪ್ 10ರ ಕೊನೆಯಲ್ಲಿ ನಿಂತಿದೆ.
ಈ ಟಾಪ್ 10 ಪಟ್ಟಿಯಲ್ಲಿ ಒಟ್ಟು 38 ದೇಶಗಳು ಸ್ಥಾನ ಪಡೆದಿರುತ್ತವೆ.
ಭಾರತದ ಸ್ಥಾನ 80 ;
ವರದಿ ಪ್ರಕಾರ, ಭಾರತ 2026ರ ಸೂಚ್ಯಂಕದಲ್ಲಿ 80ನೇ ಸ್ಥಾನದಲ್ಲಿದೆ. ಅಲ್ಜೀರಿಯಾ ಮತ್ತು ನೈಜರ್ ದೇಶಗಳೊಂದಿಗೆ ಭಾರತ ಈ ಸ್ಥಾನವನ್ನು ಹಂಚಿಕೊಂಡಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಪ್ರಸ್ತುತ 55 ದೇಶಗಳಿಗೆ ವೀಸಾ ರಹಿತ ಅಥವಾ ವೀಸಾ-ಆನ್-ಅರೈವಲ್ ಮೂಲಕ ಪ್ರವೇಶ ಪಡೆಯಬಹುದು. ಕಳೆದ ವರ್ಷ ಭಾರತ 85ನೇ ಸ್ಥಾನದಲ್ಲಿದ್ದರೆ, ಈ ಬಾರಿ ಐದು ಸ್ಥಾನಗಳಷ್ಟು ಮೇಲೇರಿಕೆಯಾಗಿದೆ. ತಜ್ಞರ ಪ್ರಕಾರ, ಇದು ಧನಾತ್ಮಕ ಬೆಳವಣಿಗೆಯಾದರೂ, ಜಾಗತಿಕ ಮಟ್ಟದಲ್ಲಿ ಮುಕ್ತ ಸಂಚಾರದ ದೃಷ್ಟಿಯಿಂದ ಇನ್ನೂ ಭಾರತಕ್ಕೆ ಸಾಕಷ್ಟು ಸುಧಾರಣೆ ಅಗತ್ಯವಿದೆ. ಅಲ್ಲದೇ, ಈ ಮೂಲಕ ಭಾರತ ತನ್ನ ಸ್ಥಾನವನ್ನು ನಿಧಾನವಾಗಿ ಉತ್ತಮಪಡಿಸಿಕೊಳ್ಳುತ್ತಿದ್ದು, ಮುಂದಿನ ವರ್ಷಗಳಲ್ಲಿ ಹೆಚ್ಚಿನ ವೀಸಾ ಮುಕ್ತ ಒಪ್ಪಂದಗಳು ಮತ್ತು ಬಲವಾದ ರಾಜತಾಂತ್ರಿಕ ಸಂಬಂಧಗಳ ಮೂಲಕ ಪಾಸ್‌ಪೋರ್ಟ್ ಬಲವನ್ನು ಹೆಚ್ಚಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನೂ ಓದಿ :Sakleshpur: ಮಹಿಳೆಯನ್ನು ಕೊಂದ ಪುಂಡಾನೆ ಸೆರೆಗೆ ಮುಹೂರ್ತ ಫಿಕ್ಸ್
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

