ದೆಹಲಿ: ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಪಂದ್ಯಾವಳಿಗೆ (Asian Games) ಸಜ್ಜಾಗುತ್ತಿರುವ ಭಾರತೀಯ ಕುಸ್ತಿ ಕ್ಷೇತ್ರಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದ ಗ್ರೇಕೊ-ರೋಮನ್ (Greco-Roman) ಶೈಲಿಯ ಕುಸ್ತಿಪಟು ದೀಪಕ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದು, ಅವರನ್ನು ಭಾರತೀಯ ಕುಸ್ತಿ ಫೆಡರೇಶನ್ (WFI) ತಂಡದಿಂದ ಹೊರಹಾಕಿದೆ.
ಇತ್ತೀಚೆಗಷ್ಟೇ ಮುಕುಲ್ ದಹಿಯಾ (ಫ್ರೀಸ್ಟೈಲ್ 86 ಕೆಜಿ) ಹಾಗೂ ದೀಪಾಂಶು (ಗ್ರೇಕೊ-ರೋಮನ್ 130 ಕೆಜಿ) ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಭಾರತ ಎರಡು ಸ್ಪರ್ಧಾತ್ಮಕ ಸ್ಥಾನಗಳನ್ನು ಕಳೆದುಕೊಂಡಿತ್ತು. ಇದೀಗ ದೀಪಕ್ ಪ್ರಕರಣದೊಂದಿಗೆ ಭಾರತಕ್ಕೆ ಮೂರನೇ ಆಘಾತ ಎದುರಾಗಿದೆ.
ದೆಹಲಿ ಮೂಲದ ದೀಪಕ್, ಭಾರತೀಯ ಅಂಚೆ ಇಲಾಖೆಯಿಂದ ‘ಏಷ್ಯನ್ ಗೇಮ್ಸ್ ಭಾರತ ತಂಡಕ್ಕೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದರು. ಫೆಡರೇಶನ್ ಕಪ್‌ನಲ್ಲಿ ಪದಕ ಗೆದ್ದಿದ್ದ ಅವರು, ಮೇ 31 ರಂದು ಲಕ್ನೋದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಏಷ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಕಾಯ್ದೆ ಬಿಡುಗಡೆ ಮಾಡಿದ ನೋಟಿಸ್ ಪ್ರಕಾರ, ಲಕ್ನೋದಲ್ಲಿ ಮೇ 31 ರಂದು ಸಂಗ್ರಹಿಸಲಾದ ದೀಪಕ್ ಅವರ ಮೂತ್ರದ ಮಾದರಿಯಲ್ಲಿ ‘ಕ್ಲೋಮಿಫಿನ್’ ಎಂಬ ನಿಷೇಧಿತ ವಸ್ತುವಿನ ಅಂಶ ಪತ್ತೆಯಾಗಿದೆ.ವಾಡಾ (WADA) ಪ್ರಕಟಿತ 2026ರ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಇದು S4 (ಹಾರ್ಮೋನ್ ಮತ್ತು ಮೆಟಬಾಲಿಕ್ ಮೊಡ್ಯುಲೇಟರ್) ವಿಭಾಗದಡಿಯಲ್ಲಿ ಬರುತ್ತದೆ.
ಕ್ಲೋಮಿಫಿನ್ ಎನ್ನುವುದು ಪುರುಷರು ಹಾಗೂ ಮಹಿಳೆಯರಲ್ಲಿ ಸಂತಾನಹೀನತೆ ಚಿಕಿತ್ಸೆಗೆ ಬಳಸುವ ಔಷಧವಾಗಿದೆ. ಜುಲೈ 23 ರಂದು ಇದನ್ನು ಪ್ರಾಥಮಿಕವಾಗಿ ಪತ್ತೆಹಚ್ಚಲಾಗಿದ್ದು, ಆಗಸ್ಟ್ 17 ರಂದು ದೀಪಕ್ ಅವರ ವಿಚಾರಣೆ ನಡೆಸಿದ ಬಳಿಕ ನಾಡಾ (NADA) ಇದನ್ನು ‘ಅಡ್ವರ್ಸ್ ಅನಾಲಿಟಿಕಲ್ ಫೈಂಡಿಂಗ್’ ಎಂದು ಪರಿಗಣಿಸಿದೆ.
ಇದನ್ನೂ ಓದಿ: ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ಸ್ಕೇಟಿಂಗ್: ಶ್ರೀರಾಮ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
ದೀಪಕ್ ಅವರನ್ನು ತಂಡದಿಂದ ಹಿಂಪಡೆಯುವ ನಿರ್ಧಾರದ ಕುರಿತು ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ದೀಪಕ್ ಅವರು ಟ್ರಯಲ್ಸ್‌ನಲ್ಲಿ ಗೆದ್ದು ಕೋಚ್‌ಗಳಿಗೆ ಅಚ್ಚರಿ ಮೂಡಿಸಿದ್ದರು. ಅವರು ಎಂದೂ ರಾಷ್ಟ್ರೀಯ ಶಿಬಿರದ ಭಾಗವಾಗಿರಲಿಲ್ಲ, ಹೀಗಾಗಿ ಅವರ ಮೇಲೆ ಹೆಚ್ಚು ಡೋಪಿಂಗ್ ಪರೀಕ್ಷೆಗಳು ನಡೆದಿರಲಿಲ್ಲ. ಒಂದು ವೇಳೆ ಏಷ್ಯನ್ ಗೇಮ್ಸ್ ಪಂದ್ಯಾವಳಿಯ ಸಮಯದಲ್ಲಿ ಅವರು ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದಿದ್ದರೆ, ಜಾಗತಿಕ ಕುಸ್ತಿ ಸಂಸ್ಥೆ ನಮ್ಮ ಫೆಡರೇಶನ್‌ಗೆ ಬರೋಬ್ಬರಿ 20 ಲಕ್ಷ ದಂಡ ವಿಧಿಸುತ್ತಿತ್ತು. ಆ ರಿಸ್ಕ್ ಬೇಡವೆಂದು ಅವರನ್ನು ತಂಡದಿಂದ ಹೊರಗಿಡುತ್ತಿದ್ದೇವೆ.” ಎಂದು ಹೇಳಿದ್ದಾರೆ.

