ಕೇರಳ: ಕೊಯಿಕ್ಕೋಡ್ ಜಿಲ್ಲೆಯ ಗೋವಿಂದಾಪುರಂ ನಿವಾಸಿ ಯು. ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಶಿಮ್ಜಿತಾ ಮುಸ್ತಫಾ ಅವರನ್ನು ಬುಧವಾರ ಕೇರಳ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಶಿಮ್ಜಿತಾರನ್ನು ವಡಕಾರದ ಸಂಬಂಧಿಯ ಮನೆಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ನಂತರ ಕೊಯಿಲಾಂಡಿ ತಾಲ್ಲೂಕು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಬಳಿಕ, ಕುನ್ನಮಂಗಲಂ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನ್ಯಾಯಾಲಯ ಶಿಮ್ಜಿತಾರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮನ್ಜೇರಿ ಮಹಿಳಾ ಜೈಲಿಗೆ ಕಳುಹಿಸಿದೆ.
ಈ ಪ್ರಕರಣದಲ್ಲಿ ಶಿಮ್ಜಿತಾ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಅಲ್ಲದೆ ದೇಶದಿಂದ ಪರಾರಿಯಾಗದಂತೆ ತಡೆಯಲು ಲುಕ್‌ಔಟ್ ಸರ್ಕ್ಯುಲರ್ ಕೂಡ ಜಾರಿಗೊಳಿಸಲಾಗಿತ್ತು.
ಇದನ್ನೂ ಓದಿ: ಗ್ರೀನ್‌ಲ್ಯಾಂಡ್ ವಶಪಡಿಸಲು ಮುಂದಾದ ಟ್ರಂಪ್‌ಗೆ ಬಿಗ್ ಶಾಕ್
ಜನವರಿ 16ರಂದು ಕೇರಳದ ಪಯ್ಯನ್ನೂರು ಭಾಗದಲ್ಲಿ ನಡೆದ ಬಸ್ ಪ್ರಯಾಣದ ವೇಳೆ, ದೀಪಕ್ ತನ್ನನ್ನು ಲೈಂಗಿಕವಾಗಿ ಕಿರುಕುಳ ನೀಡಿದ ಎಂದು ಶಿಮ್ಜಿತಾ ಆರೋಪಿಸಿದ್ದರು
ಅವರು ಈ ಕುರಿತು ವೀಡಿಯೋ ಮಾಡಿ ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ಭಾರೀ ವೈರಲ್ ಆಗಿ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಇದರಿಂದ ದೀಪಕ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ, ಅವಮಾನ, ಟ್ರೋಲಿಂಗ್ ಶುರುವಾಯಿತು ಎಂದು ವರದಿಯಾಗಿದೆ.
ಸಾರ್ವಜನಿಕ ಅವಮಾನ ಹಾಗೂ ಮಾನಸಿಕ ಆಘಾತದಿಂದ ನೊಂದ ದೀಪಕ್, ಜನವರಿ 18ರಂದು ಬೆಳಿಗ್ಗೆ ತನ್ನ ಮನೆಗೆ ಒಳಗಿರುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು.
ಆ ಸಮಯದಲ್ಲಿ ಮನೆಯಲ್ಲಿ ಅವರ ಪೋಷಕರು ಮಾತ್ರ ಇದ್ದರು. ದೀಪಕ್ ಬೆಳಿಗ್ಗೆ ಎದ್ದಿಲ್ಲ, ಕೋಣೆಯಿಂದ ಪ್ರತಿಕ್ರಿಯೆ ಇಲ್ಲದ ಕಾರಣ ನೆರೆಹೊರೆಯವರನ್ನು ಕರೆಸಿ ಬಾಗಿಲು ಒಡೆದು ನೋಡಿದಾಗ, ಸೀಲಿಂಗ್ ಫ್ಯಾನ್ ಹುಕ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ದೀಪಕ್ ಮೃತದೇಹ ಪತ್ತೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಕ್ ಅವರ ತಾಯಿ ಕನ್ಯಾಕಾ ಪೊಲೀಸ್ ಠಾಣೆಗೆ ದೂರು ನೀಡಿ, ಶಿಮ್ಜಿತಾ ಮಾಡಿದ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಹಾಗೂ ಸೋಶಿಯಲ್ ಮೀಡಿಯಾ ಫೇಮ್ ಪಡೆಯಲು ಇಂತಹ ಪ್ರಕರಣವನ್ನು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.
ಇದನ್ನಾಧರಿಸಿ ಜನವರಿ 19ರಂದು ಕೊಯಿಕ್ಕೋಡ್ ಮೆಡಿಕಲ್ ಕಾಲೇಜ್ ಪೊಲೀಸರು ಶಿಮ್ಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಘಟನೆಯಲ್ಲಿ ಸಂಬಂಧಿಸಿದ ಬಸ್‌ನ CCTV ದೃಶ್ಯಾವಳಿ ಸಂಗ್ರಹಿಸಿದ್ದಾರೆ.
ಪರಿಶೀಲನೆಯ ವೇಳೆ, ಶಿಮ್ಜಿತಾ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದ ವೀಡಿಯೋ ಎಡಿಟ್ ಮಾಡಲ್ಪಟ್ಟಿದ್ದು, ಕಡಿಮೆ ಅವಧಿಗೆ ಕಟ್ ಮಾಡಿ ಹಾಕಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಪೂರ್ಣ ವೀಡಿಯೋವನ್ನು ಪಡೆದುಕೊಳ್ಳಲು ಪೊಲೀಸರು ಸೈಬರ್ ಸೆಲ್ ಸಹಾಯ ಪಡೆಯಲು ನಿರ್ಧರಿಸಿದ್ದಾರೆ.
ಈ ಪ್ರಕರಣದಲ್ಲಿ ಕೇರಳ ರಾಜ್ಯ ಮಾನವ ಹಕ್ಕು ಆಯೋಗ ಕೂಡ ಮಧ್ಯಪ್ರವೇಶಿಸಿದ್ದು, ಉತ್ತರ ವಲಯದ ಡಿಐಜಿ ಅವರಿಗೆ ತನಿಖೆಯ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸಲು ನಿರ್ದೇಶನ ನೀಡಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

