ದೆಹಲಿ: ದೇಶದ ಕೋಟ್ಯಾಂತರ ಡ್ರೈವಿಂಗ್ ಲೈಸೆನ್ಸ್ (DL) ಹೊಂದಿರುವ ನಾಗರಿಕರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಅತ್ಯಂತ ದೊಡ್ಡ ಸಮಾಧಾನಕರ ನಿರ್ಧಾರವೊಂದನ್ನು ಪ್ರಕಟಿಸುವ ಸಾಧ್ಯತೆಯಿದೆ. ಪ್ರಸ್ತುತ 20 ವರ್ಷಗಳ ಅವಧಿಗೆ ನೀಡಲಾಗುತ್ತಿರುವ ಚಾಲನಾ ಪರವಾನಗಿಯ ಸಿಂಧುತ್ವವನ್ನು (Validity) ನೇರವಾಗಿ 50 ವರ್ಷಗಳವರೆಗೆ ಹೆಚ್ಚಿಸುವ ಮಹತ್ವದ ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಶೀಲಿಸುತ್ತಿದೆ. ಈ ನಿಯಮ ಜಾರಿಗೆ ಬಂದರೆ, ನಾಗರಿಕರು ಪದೇ ಪದೇ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಅಲೆಯುವ ಮತ್ತು ಲೈಸೆನ್ಸ್ ನವೀಕರಣ (Renewal) ಮಾಡುವ ಕಿರಿಕಿರಿ ತಪ್ಪಲಿದೆ.
ಈ ಕುರಿತು ಮಾಹಿತಿ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳು, “ಸಚಿವಾಲಯದ ಮುಂದೆ ಸಾರ್ವಜನಿಕ ಸೇವೆಗಳನ್ನು ಸುಲಭಗೊಳಿಸಲು ಹಲವು ಪ್ರಸ್ತಾವನೆಗಳು ಬಂದಿದ್ದು, ಅದರಲ್ಲಿ ಡ್ರೈವಿಂಗ್ ಲೈಸೆನ್ಸ್ ಅವಧಿಯನ್ನು 50 ವರ್ಷಕ್ಕೆ ವಿಸ್ತರಿಸುವುದು ಕೂಡ ಒಂದಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ, ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈಗಿನ ನಿಯಮಗಳ ಪ್ರಕಾರ, ಒಮ್ಮೆ ಪಡೆದ ಚಾಲನಾ ಪರವಾನಗಿಯು 20 ವರ್ಷಗಳವರೆಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ. ಆ ಅವಧಿ ಮುಗಿದ ನಂತರ ನಾಗರಿಕರು ಅಗತ್ಯ ದಾಖಲೆಗಳು ಹಾಗೂ ಕೆಲವು ಸಂದರ್ಭಗಳಲ್ಲಿ ಆರೋಗ್ಯ ಪ್ರಮಾಣಪತ್ರವನ್ನು (Medical Certificate) ಸಲ್ಲಿಸಿ ಆರ್‌ಟಿಒ ಮೂಲಕ ನವೀಕರಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಪ್ರಸ್ತಾವನೆಯು ಸಾರ್ವಜನಿಕ ಸೇವೆಗಳ ಪ್ರವೇಶವನ್ನು ಸುಲಭಗೊಳಿಸುವ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ.
ಲೈಸೆನ್ಸ್ ನವೀಕರಣದ ಅವಧಿ ಹೆಚ್ಚಾದರೆ ರಾಜ್ಯ ಸರ್ಕಾರಗಳಿಗೆ ಆರ್‌ಟಿಒ ಮೂಲಕ ಬರುತ್ತಿದ್ದ ನವೀಕರಣ ಶುಲ್ಕದ ಆದಾಯ ನಷ್ಟವಾಗಬಹುದು ಎಂದು ಕೆಲವು ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಡಿಜಿಟಲ್ ವೇದಿಕೆಗಳ ಮೂಲಕ ಲೈಸೆನ್ಸ್ ಪಡೆಯುವಾಗ ಅಥವಾ ಇತರೆ ಸೇವೆಗಳ ಮೂಲಕ ಶುಲ್ಕ ಸಂಗ್ರಹಣೆಯನ್ನು ಮುಂದುವರಿಸಬಹುದಾಗಿರುವುದರಿಂದ ರಾಜ್ಯಗಳ ಆದಾಯಕ್ಕೆ ಯಾವುದೇ ದೊಡ್ಡ ಹೊಡೆತ ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಟಾಟಾ ಇವಿ ಖರೀದಿದಾರರಿಗೆ ಭರ್ಜರಿ ಆಫರ್: ಜೂನ್‌ನಲ್ಲಿ 3.35 ಲಕ್ಷದವರೆಗೆ ರಿಯಾಯಿತಿ!
ಅವಧಿ ಹೆಚ್ಚಾದ ತಕ್ಷಣ ಚಾಲಕರು ನಿಯಮ ಉಲ್ಲಂಘಿಸಿದರೆ ಏನು ಮಾಡುವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ, ಭವಿಷ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರಿಗೆ ‘ನೆಗೆಟಿವ್ ಪಾಯಿಂಟ್ಸ್’ ನೀಡುವ ವ್ಯವಸ್ಥೆಯನ್ನು ತರಲಾಗುವುದು. ಈ ಪಾಯಿಂಟ್‌ಗಳ ಆಧಾರದ ಮೇಲೆ ನಿಯಮ ಮುರಿಯುವ ಚಾಲಕರ ಲೈಸೆನ್ಸ್ ಅನ್ನು ಅಮಾನತು ಅಥವಾ ರದ್ದು ಮಾಡಲು ಅವಕಾಶವಿರಲಿದ್ದು, ಇದರಿಂದ ಬೇಜವಾಬ್ದಾರಿ ಚಾಲಕರನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ವಿವರಿಸಿದೆ. ಇದರೊಂದಿಗೆ, ವಾಹನದ ಮಾಲೀಕತ್ವ ವರ್ಗಾವಣೆ ಮತ್ತು ಪರ್ಮಿಟ್ ನವೀಕರಣಗಳಂತಹ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡುವ ಮೂಲಕ ಸಾರ್ವಜನಿಕರು ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಆಟೋ ಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


