ಮುಂಬೈ: ಬ್ಯಾಂಕಾಕ್ನಿಂದ ಕೋಟಿಗಟ್ಟಲೆ ಮೌಲ್ಯದ ಮಾದಕ ವಸ್ತುವನ್ನು ಸೂಟ್ಕೇಸ್ನಲ್ಲಿ ಅಡಗಿಸಿಟ್ಟುಕೊಂಡು ಭಾರತಕ್ಕೆ ಸಾಗಿಸುತ್ತಿದ್ದ 28 ವರ್ಷದ ಪ್ರಸಿದ್ಧ ಮಾಡೆಲ್ ಹಾಗೂ ಮಾಜಿ ‘ಮಿಸಸ್ ಕೇರಳ’ ಸ್ಪರ್ಧಿಯೊಬ್ಬರು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಮಾಡೆಲ್ ಅನ್ನು ಹರ್ಷಾ ಸನ್ನಿ (28) ಎಂದು ಗುರುತಿಸಲಾಗಿದ್ದು, ಆಕೆಯಿಂದ ಬರೋಬ್ಬರಿ 11.82 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಲಾಗಿದೆ.
ಜೂನ್ 10 ಮತ್ತು 11 ರ ಮಧ್ಯರಾತ್ರಿ ಬ್ಯಾಂಕಾಕ್ನಿಂದ ಏರ್ ಇಂಡಿಯಾ ವಿಮಾನ (TG-351) ಮೂಲಕ ಹರ್ಷಾ ಸನ್ನಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾಳೆ. ಏರ್ಪೋರ್ಟ್ನಲ್ಲಿ ವಾಡಿಕೆಯ ಕಣ್ಗಾವಲು ನಡೆಸುತ್ತಿದ್ದ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಮತ್ತು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳಿಗೆ ಈಕೆಯ ನಡವಳಿಕೆ ತೀವ್ರ ಸಂದೇಹಾಸ್ಪದವಾಗಿ ಕಂಡುಬಂದಿದೆ. ತಕ್ಷಣ ಆಕೆಯನ್ನು ತಡೆದು ನಿಲ್ಲಿಸಿದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಅಧಿಕಾರಿಗಳು ಹರ್ಷಾ ಸನ್ನಿ ತಂದಿದ್ದ ಟ್ರೋಲಿ ಬ್ಯಾಗ್ ಅನ್ನು ಸಂಪೂರ್ಣವಾಗಿ ಜಾಲಾಡಿದಾಗ, ಅದರಲ್ಲಿ ವ್ಯಾಕ್ಯೂಮ್ ಸೀಲ್ಡ್ (ಗಾಳಿಯಾಡದಂತೆ ಪ್ಯಾಕ್ ಮಾಡಿದ) ಒಟ್ಟು 12 ಪ್ಲಾಸ್ಟಿಕ್ ಪ್ಯಾಕೆಟ್ಗಳು ಪತ್ತೆಯಾಗಿವೆ. ಅವುಗಳಲ್ಲಿ ಹಸಿರು ಬಣ್ಣದ ಪದಾರ್ಥ ತುಂಬಿರುವುದನ್ನು ಗಮನಿಸಿದ ಅಧಿಕಾರಿಗಳು, ಸ್ಥಳದಲ್ಲೇ ಎನ್ಡಿಪಿಎಸ್ (NDPS) ಕಿಟ್ ಬಳಸಿ ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅದು ಅತ್ಯಂತ ದುಬಾರಿ ಹಾಗೂ ಉತ್ತಮ ಗುಣಮಟ್ಟದ ‘ಹೈಡ್ರೋಪೋನಿಕ್ ಮರಿಜುವಾನಾ’ (ಗಾಂಜಾ) ಎಂಬುದು ದೃಢಪಟ್ಟಿದೆ.ಬ್ಯಾಗ್ನಲ್ಲಿದ್ದ ಒಟ್ಟು ಗಾಂಜಾದ ತೂಕ 11 ಕೆಜಿಗೂ ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 11.82 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಗೃಹಿಣಿಯ ನಿಗೂಢ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೋಷಕರ ಆಕ್ರೋಶ
2025ರ ‘ಮಿಸಸ್ ಕೇರಳ’ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹರ್ಷಾ ಸನ್ನಿ, ನಿಷೇಧಿತ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಕಾಯ್ದೆ ಹಾಗೂ ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದಾಳೆ. ಬಂಧಿತ ಮಾಡೆಲ್ ಅನ್ನು ಮುಂಬೈನ ಫೋರ್ಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಬ್ಯಾಂಕಾಕ್ನಿಂದ ತರಲಾಗಿದ್ದ ಈ ಕೋಟಿ ಕೋಟಿ ಮೌಲ್ಯದ ಡ್ರಗ್ಸ್ ಜಾಲದ ಹಿಂದೆ ಯಾರಿದ್ದಾರೆ ಮತ್ತು ಇದನ್ನು ಮುಂಬೈ ಅಥವಾ ದೇಶದ ಬೇರೆ ಯಾವ ಭಾಗಕ್ಕೆ ತಲುಪಿಸಲು ಸ್ಕೆಚ್ ಹಾಕಲಾಗಿತ್ತು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


