ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಗುರುತಿಸಿಕೊಂಡಿರುವ ನಟ ರಂಜಿತ್ ಕುಮಾರ್ ಹಾಗೂ ಅವರ ಪತ್ನಿ ಮಾನಸಾ ಗೌಡ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ದೊಡ್ಡ ರಹಸ್ಯವೊಂದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಮಾನಸಾ ಅವರಿಗೆ ಇದು ಎರಡನೇ ಮದುವೆ ಮತ್ತು ಅವರಿಗೆ ಮೊದಲನೇ ಮದುವೆಯಿಂದ ಒಂದು ಮಗುವಿದೆ ಎಂಬ ಸತ್ಯವನ್ನು ಈ ದಂಪತಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಹಲವು ತಿಂಗಳುಗಳ ಹಿಂದೆ ಮಾನಸಾ ಗೌಡ ಹಾಗೂ ಅವರ ಅಕ್ಕ ರಶ್ಮಿ ಅವರ ನಡುವೆ ನಡೆದಿದ್ದ ಕೌಟುಂಬಿಕ ಜಗಳದ ಸಂದರ್ಭದಲ್ಲಿ ಈ ವಿಚಾರ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿತ್ತು. ಆದರೆ, ಇತ್ತೀಚೆಗೆ ನೀಡಿದ ಜಂಟಿ ಸಂದರ್ಶನದಲ್ಲಿ ಸ್ವತಃ ರಂಜಿತ್ ಮತ್ತು ಮಾನಸಾ ಈ ವಿಷಯದ ಕುರಿತು ಮಾತನಾಡಿದ್ದಾರೆ. ಮಾನಸಾ ಗೌಡ ಅವರಿಗೆ ಈ ಹಿಂದೆ ಮದುವೆಯಾಗಿದ್ದು, ಆ ವೈವಾಹಿಕ ಜೀವನದಿಂದ ಅವರಿಗೆ ಒಂದು ಮಗು ಕೂಡ ಇದೆ ಎಂಬುದನ್ನು ದಂಪತಿ ಸ್ಪಷ್ಟಪಡಿಸಿದ್ದಾರೆ.
ಸಂದರ್ಶನದಲ್ಲಿ ಪತ್ನಿಯ ಗತಕಾಲದ ಜೀವನದ ಬಗ್ಗೆ ಸಮಾಜ ಆಡಿಕೊಳ್ಳುವ ಮಾತುಗಳಿಗೆ ರಂಜಿತ್ ಅತ್ಯಂತ ಭಾವುಕವಾಗಿ ಹಾಗೂ ಖಡಕ್ ಆಗಿ ಉತ್ತರಿಸಿದ್ದಾರೆ. “ನನ್ನ ಹೆಂಡ್ತಿಗೆ ಮಾತ್ರ ಈ ರೀತಿ ಆಗಿರೋದಾ? ನನ್ನ ಪತ್ನಿಗೆ ಮಾತ್ರ ಎರಡನೇ ಮದುವೆ ಆಗಿರೋದಾ? ನನ್ನ ತರ ಬೇರೆಯವರಿಗೂ ಈ ರೀತಿ ಜೀವನ ಇರಬಹುದು. ಒಂದು ಹುಡುಗಿಗೆ ತನಗಿಷ್ಟ ಬಂದಂತೆ ಬದುಕಲು ಇನ್ನೊಂದು ಲೈಫ್ ಸಿಗಬಾರದಾ? ಆ ಅಮಾಯಕ ಮಗುವಿಗೆ ಮತ್ತೊಂದು ಒಳ್ಳೆಯ ಜೀವನ ಸಿಗಬಾರದಾ?” ಎಂದು ರಂಜಿತ್ ಪ್ರಶ್ನಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಇದು ಕೇವಲ ಸೆಲೆಬ್ರಿಟಿಗಳ ಜೀವನದಲ್ಲಿ ಮಾತ್ರವಲ್ಲ, ಸಾಮಾನ್ಯ ಜನರ ಬದುಕಿನಲ್ಲೂ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಅದನ್ನೇ ದೊಡ್ಡ ಇಶ್ಯೂ ಮಾಡುವ ಅಗತ್ಯವಿಲ್ಲ” ಎಂದು ಹೇಳುವ ಮೂಲಕ ಪತ್ನಿ ಮತ್ತು ಮಗುವಿಗೆ ತಮ್ಮ ಸಂಪೂರ್ಣ ಬೆಂಬಲ ಇರುವುದನ್ನು ಸಾಬೀತುಪಡಿಸಿದ್ದಾರೆ. ರಂಜಿತ್ ಅವರ ಈ ಪ್ರಬುದ್ಧ ನಿರ್ಧಾರ ಮತ್ತು ಪತ್ನಿಯ ಮೇಲಿನ ಗೌರವಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಭರ್ಜರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


