ಮಧ್ಯರಾತ್ರಿ ಎದೆನೋವಿನಿಂದ ತತ್ತರಿಸಿದ ವ್ಯಕ್ತಿ: ದೇವದೂತರಂತೆ ಬಂದು ಪ್ರಾಣ ಉಳಿಸಿದ ಬಂಟ್ವಾಳ ಪೊಲೀಸರು

ಬಂಟ್ವಾಳ: ಮಧ್ಯರಾತ್ರಿ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವಿನಿಂದ ಬಳಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ, ಪ್ರಾಣ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಸಮೀಪದ ಗೂಡಿನಬೈಲು ಎಂಬಲ್ಲಿ ಈ ಶ್ಲಾಘನೀಯ ಘಟನೆ ನಡೆದಿದೆ.

ಗೂಡಿನಬೈಲು ನಿವಾಸಿ ಅಶ್ರಫ್ ಎಂಬವರಿಗೆ ಮಧ್ಯರಾತ್ರಿ ಹಠಾತ್ತನೆ ತೀವ್ರ ಎದೆನೋವು ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ಸಮಯ ಕಳೆದಂತೆ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಗಾಬರಿಗೊಂಡ ಕುಟುಂಬಸ್ಥರು ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಗೂಡಿನಬೈಲು ಪರಿಸರದಲ್ಲಿ ನೈಟ್ ಬೀಟ್ (ರಾತ್ರಿ ಗಸ್ತು) ಕರ್ತವ್ಯದಲ್ಲಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ವಿನೋದ್ ಮತ್ತು ಗೃಹರಕ್ಷಕ ದಳದ (ಹೋಮ್ ಗಾರ್ಡ್ಸ್) ಸಿಬ್ಬಂದಿ ಜಯಗಣೇಶ್ ಅವರಿಗೆ ಈ ಆಕ್ರಂದನ ಕೇಳಿಸಿದೆ.

ಇದನ್ನೂ ಓದಿ:ಬಂಟ್ವಾಳ: ದೈವದ ತಂಬಿಲದ ನಡುವೆಯೇ ಮದ್ಯಪಾನ; ಪ್ರಶ್ನಿಸಿದ ದೊಡ್ಡಪ್ಪನಿಗೆ ಬೀರ್ ಬಾಟಲಿಯಿಂದ ಇರಿದು ಕೊಂದ ಪಾಪಿ ಮಗ!

ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಧ್ವನಿ ಕೇಳಿಬಂದ ಅಶ್ರಫ್ ಅವರ ಮನೆಗೆ ಧಾವಿಸಿದ್ದಾರೆ. ಪ್ರಾಥಮಿಕ ಲಕ್ಷಣಗಳನ್ನು ಗಮನಿಸಿದಾಗ ಅಶ್ರಫ್ ಅವರಿಗೆ ಲಘು ಹೃದಯಾಘಾತ  ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿನೋದ್ ಮತ್ತು ಜಯಗಣೇಶ್ ಅವರು ಅಶ್ರಫ್ ಅವರಿಗೆ ತುರ್ತು ಪ್ರಥಮ ಚಿಕಿತ್ಸೆ (First Aid) ನೀಡಿ, ಸಮಯ ವ್ಯರ್ಥ ಮಾಡದೆ ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ಸಂಪೂರ್ಣ ನೆರವು ನೀಡಿದ್ದಾರೆ.

ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ ಅಶ್ರಫ್ ಅವರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆತಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಕಿ ಉಡುಪಿನೊಳಗಿನ ಮಾನವೀಯತೆಯನ್ನು ತೋರ್ಪಡಿಸಿ, ಸಾರ್ವಜನಿಕರೊಬ್ಬರ ಜೀವ ರಕ್ಷಿಸಿದ ಕಾನ್ಸ್‌ಟೇಬಲ್ ವಿನೋದ್ ಮತ್ತು ಹೋಮ್ ಗಾರ್ಡ್ ಜಯಗಣೇಶ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು