ಮಕ್ಕಳ ತೊದಲು ನುಡಿಗೆ ಮನೆಯಲ್ಲೇ ಇದೆ ಮದ್ದು: ಮಾತಿನ ಸ್ಪಷ್ಟತೆ ಹೆಚ್ಚಿಸಲು ಇಲ್ಲಿವೆ ಸುಲಭ ಮನೆಮದ್ದುಗಳು

ಮಕ್ಕಳು 2 ರಿಂದ 5 ವರ್ಷದೊಳಗಿರುವಾಗ ಮಾತು ಕಲಿಯುವ ಭರದಲ್ಲಿ ತೊದಲುವುದು ನೈಸರ್ಗಿಕ. ಆದರೆ ಆ ವಯಸ್ಸು ದಾಟಿದ ಮೇಲೂ ಮಗು ಸರಿಯಾಗಿ ಮಾತನಾಡಲು ಪರದಾಡುತ್ತಿದ್ದರೆ, ಜೇನುತುಪ್ಪ, ಬಾದಾಮಿ ಮತ್ತು ಕೆಲವು ಸರಳ ವಾಕ್-ಅಭ್ಯಾಸಗಳ ಮೂಲಕ ಇದನ್ನು ಸರಿಪಡಿಸಬಹುದು.

ಪರಿಣಾಮಕಾರಿ ಮನೆಮದ್ದುಗಳು

ಬಾದಾಮಿ ಮತ್ತು ಕಾಳುಮೆಣಸು: 7 ಬಾದಾಮಿ ಬೇಳೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಸಿಪ್ಪೆ ತೆಗೆದು 7 ಕಾಳುಮೆಣಸಿನೊಂದಿಗೆ ನುಣ್ಣಗೆ ಅರೆಯಿರಿ. ಇದಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ಮಗುವಿಗೆ ನಿಯಮಿತವಾಗಿ ತಿನ್ನಿಸುವುದರಿಂದ ನಾಲಿಗೆಯ ಜಡತ್ವ ದೂರವಾಗಿ ಮಾತು ಸ್ಪಷ್ಟವಾಗುತ್ತದೆ.

ಶುದ್ಧ ಜೇನುತುಪ್ಪ : ಜೇನುತುಪ್ಪವು ನಾಲಿಗೆಯ ಸ್ನಾಯುಗಳನ್ನು ಬಲಪಡಿಸಲು ಸಹಕಾರಿ. ಪ್ರತಿದಿನ ಬೆಳಗ್ಗೆ ಮಗುವಿನ ನಾಲಿಗೆಗೆ ಸ್ವಲ್ಪ ಜೇನುತುಪ್ಪವನ್ನು ಸವರಿ ಮಸಾಜ್ ಮಾಡುವುದರಿಂದ ಅಥವಾ ಒಂದು ಚಮಚ ಜೇನುತುಪ್ಪವನ್ನು ನಿಯಮಿತವಾಗಿ ತಿನ್ನಿಸುವುದರಿಂದ ತೊದಲು ನುಡಿ ಕಡಿಮೆಯಾಗುತ್ತದೆ.

ನೆಲ್ಲಿಕಾಯಿ : ಹಸಿ ನೆಲ್ಲಿಕಾಯಿಯನ್ನು ಅಗಿಯಲು ಕೊಡುವುದರಿಂದ ನಾಲಿಗೆಯ ದಪ್ಪಗಿರುವಿಕೆ ಕಡಿಮೆಯಾಗಿ ಮಾತು ಸರಾಗವಾಗುತ್ತದೆ. ಮಗು ಹಸಿ ಕಾಯಿ ತಿನ್ನದಿದ್ದರೆ, ಒಣ ನೆಲ್ಲಿಕಾಯಿ ಪುಡಿಗೆ ಜೇನುತುಪ್ಪ ಸೇರಿಸಿ ನೆಕ್ಕಿಸಬಹುದು.

ಬ್ರಾಹ್ಮಿ ಮತ್ತು ಶಂಖಪುಷ್ಪಿ : ಇವು ಮೆದುಳಿನ ನರಗಳನ್ನು ಉತ್ತೇಜಿಸುವ ಆಯುರ್ವೇದ ಮೂಲಿಕೆಗಳಾಗಿವೆ. ವೈದ್ಯರ ಸಲಹೆಯ ಮೇರೆಗೆ ಇವುಗಳ ಸಿರಪ್ ಅಥವಾ ಚೂರ್ಣವನ್ನು ಜೇನುತುಪ್ಪದೊಂದಿಗೆ ನೀಡಬಹುದು.

ಇದನ್ನೂ ಓದಿ: Health Tips: ಈ 5 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ

ಪೋಷಕರು ಮಾಡಬೇಕಾದ ಪ್ರಮುಖ ಕೆಲಸಗಳು

ತಾಳ್ಮೆಯಿಂದ ಆಲಿಸಿ: ಮಗು ತೊದಲುವಾಗ ರೇಗಬೇಡಿ ಅಥವಾ ಅವರ ಮಾತನ್ನು ಅರ್ಧಕ್ಕೆ ಕಡಿತಗೊಳಿಸಬೇಡಿ. ಅವರು ಪೂರ್ತಿ ಮಾತನಾಡಲು ಸಮಯ ಕೊಡಿ.

ನಿಧಾನವಾಗಿ ಮಾತನಾಡಿ: ನೀವು ಮಗುವಿನೊಂದಿಗೆ ಮಾತನಾಡುವಾಗ ಅತ್ಯಂತ ನಿಧಾನವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಿ ಮಾತನಾಡಿ. ಮಗು ನಿಮ್ಮನ್ನು ನೋಡಿ ಕಲಿಯುತ್ತದೆ.

ಉಸಿರಾಟದ ವ್ಯಾಯಾಮ : ಮಗುವಿಗೆ ದಿನಕ್ಕೆ 5-10 ನಿಮಿಷ ಪ್ರಾಣಾಯಾಮ ಅಥವಾ ದೀರ್ಘವಾಗಿ ಉಸಿರು ತೆಗೆದುಕೊಂಡು ಬಿಡುವ ಅಭ್ಯಾಸ ಮಾಡಿಸಿ. ಇದು ಮಾತನಾಡುವಾಗ ಉಸಿರಿನ ನಿಯಂತ್ರಣಕ್ಕೆ ಸಹಕರಿಸುತ್ತದೆ.

ಗಮನಿಸಿ: ಮಗುವಿಗೆ 5 ವರ್ಷ ದಾಟಿದ ಮೇಲೂ ಈ ಸಮಸ್ಯೆ ತೀವ್ರವಾಗಿದ್ದರೆ, ವಿಳಂಬ ಮಾಡದೆ ಹತ್ತಿರದ ‘ಸ್ಪೀಚ್ ಥೆರಪಿಸ್ಟ್’ (Speech Therapist) ಅಥವಾ ವಾಕ್ ಶ್ರವಣ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು