‘ಗೃಹಜ್ಯೋತಿಯಲ್ಲಿ ಯಾವುದೇ ಕಡಿತ ಇಲ್ಲ, ಜಾತಿ ಪ್ರಮಾಣಪತ್ರವೂ ಬೇಕಾಗಿಲ್ಲ: ಕೆ.ಜೆ. ಜಾರ್ಜ್‌ ಸ್ಪಷ್ಟನೆ

ಚಿಕ್ಕಮಗಳೂರು : ರಾಜ್ಯದ ಜನಪ್ರಿಯ ‘ಗೃಹಜ್ಯೋತಿ’ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಕಡಿತಗೊಳಿಸಲಾಗುತ್ತಿದೆ ಎಂಬ ವದಂತಿಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತೆರೆ ಎಳೆದಿದ್ದಾರೆ. ಚಿಕ್ಕಮಗಳೂರು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗೃಹಜ್ಯೋತಿ ಯೋಜನೆಯ ನಿಯಮಾವಳಿಗಳಲ್ಲಿ ಯಾವುದೇ ಹೊಸ ಪರಿಷ್ಕರಣೆ ಅಥವಾ ಕಡಿತ ಮಾಡುತ್ತಿಲ್ಲ. ಅರ್ಹರಾಗಿರುವ ಪ್ರತಿಯೊಬ್ಬ ನಾಗರಿಕರಿಗೂ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.

ಯೋಜನೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದನ್ನು ಸಮರ್ಥಿಸಿಕೊಂಡ ಸಚಿವರು, “ನಾವು ಕೇವಲ ಅರ್ಹರಲ್ಲದವರನ್ನು (ಅನರ್ಹರನ್ನು) ಗುರುತಿಸಿ ಅವರ ಖಾತೆಗಳನ್ನು ಮಾತ್ರ ಪರಿಷ್ಕರಣೆ ಮಾಡುತ್ತಿದ್ದೇವೆ. ಯಾರೆಲ್ಲಾ ನಿಯಮಾವಳಿಗಳ ಪ್ರಕಾರ ನಿಜವಾದ ಅರ್ಹ ಫಲಾನುಭವಿಗಳಿದ್ದಾರೋ, ಅವರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ತಲುಪಲಿದೆ,” ಎಂದರು.

Advertisement

ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ (Caste Certificate) ಕಡ್ಡಾಯ ಮಾಡಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಚಿವರು, “ಗೃಹಜ್ಯೋತಿ ಸೌಲಭ್ಯ ಪಡೆಯಲು ಸಾರ್ವಜನಿಕರು ಯಾವುದೇ ಜಾತಿ ಪ್ರಮಾಣಪತ್ರವನ್ನು ನೀಡುವ ಅವಶ್ಯಕತೆ ಇಲ್ಲ. ಅರ್ಜಿ ಫಾರಂನಲ್ಲಿರುವ ಜಾತಿ ಹೆಸರಿನ ಕಾಲಂನಲ್ಲಿ ತಮ್ಮ ಜಾತಿಯನ್ನು ಬರೆದರೆ ಅಷ್ಟೇ ಸಾಕು. ನಾವು ಯಾವುದೇ ರೀತಿಯ ವ್ಯವಹಾರ ಪತ್ರ ಅಥವಾ ಕಠಿಣ ದಾಖಲೆಗಳನ್ನು ಕೊಡುವಂತೆ ಬರೆದಿದ್ದೇವಾ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಲರ್ಟ್!: ನಾಳೆಯಿಂದಲೇ ನಿಮ್ಮ ಮನೆಗೆ ಬರಲಿದ್ದಾರೆ ಎಸ್ಕಾಂ ಅಧಿಕಾರಿಗಳು

ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೆ.ಜೆ. ಜಾರ್ಜ್, “ವಿರೋಧ ಪಕ್ಷದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಹಾಗಾಗಿ ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಮೊದಲು ಅರ್ಜಿ ಫಾರಂ ಅನ್ನು ಸರಿಯಾಗಿ ತೆಗೆದು ನೋಡಲಿ. ನಾವು ಆ ಫಾರಂ ಅನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಒಮ್ಮೆ ಆ ಫಾರಂ ಅನ್ನು ಕಣ್ಣಾರೆ ನೋಡಿದ ಮೇಲೆ ಇಡೀ ಸತ್ಯ ಎಲ್ಲರಿಗೂ ಗೊತ್ತಾಗುತ್ತದೆ,” ಎಂದು ತಿರುಗೇಟು ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *