ವಾಟ್ಸಾಪ್ ‘ಯೂಸರ್ ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್!; ಸಮಾಲೋಚನೆ ಮುಗಿಯುವವರೆಗೆ ಭಾರತದಲ್ಲಿ ರೋಲ್‌ಔಟ್ ಮಾಡದಂತೆ ಮೆಟಾ ಸಂಸ್ಥೆಗೆ ಖಡಕ್ ಸೂಚನೆ

ನವದೆಹಲಿ: ಮೆಟಾ (Meta) ಒಡೆತನದ ವಾಟ್ಸಾಪ್ ಸಂಸ್ಥೆಯು ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಬಹುನಿರೀಕ್ಷಿತ ‘ಯೂಸರ್ ನೇಮ್’ ವೈಶಿಷ್ಟ್ಯಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೊಸ ಅಪ್‌ಡೇಟ್‌ನಿಂದ ದೇಶದಲ್ಲಿ ಸೈಬರ್ ವಂಚನೆ ಮತ್ತು ನಕಲಿ ಪ್ರೊಫೈಲ್ (Impersonation) ಹಾವಳಿ ಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಐಟಿ ಸಚಿವಾಲಯ (MeitY), ಸರ್ಕಾರದೊಂದಿಗೆ ಸಂಪೂರ್ಣ ಸಮಾಲೋಚನೆ ನಡೆಸುವವರೆಗೆ ಈ ಫೀಚರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ಮೆಟಾ ಸಂಸ್ಥೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಏನಿದು ವಾಟ್ಸಾಪ್ ಯೂಸರ್ ನೇಮ್ ಫೀಚರ್?:

Advertisement

ಪ್ರಸ್ತುತ ವಾಟ್ಸಾಪ್‌ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ಮೊಬೈಲ್ ಸಂಖ್ಯೆ ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ವಾಟ್ಸಾಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್‌ಗಳ ಮಾದರಿಯಲ್ಲಿ ಫೋನ್ ನಂಬರ್ ಮರೆಮಾಚಿ ಕೇವಲ ‘ಯೂಸರ್ ನೇಮ್’ (ಉದಾಹರಣೆಗೆ: @Sanam123) ಮೂಲಕವೇ ಚಾಟ್ ಮಾಡುವ ಹೊಸ ವ್ಯವಸ್ಥೆಯನ್ನು ಪರೀಕ್ಷಿಸುತ್ತಿತ್ತು. ಈ ವಾರದಿಂದ ಜಾಗತಿಕವಾಗಿ ಯೂಸರ್ ನೇಮ್ ರಿಸರ್ವೇಶನ್ ಪ್ರಕ್ರಿಯೆಯನ್ನೂ ಆರಂಭಿಸಿತ್ತು.

ಕೇಂದ್ರ ಸರ್ಕಾರ ಮತ್ತು ಸೈಬರ್ ತಜ್ಞರ ಆತಂಕಕ್ಕೆ ಕಾರಣವೇನು?:

ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಈ ಫೀಚರ್ ಅತ್ಯಂತ ಅಪಾಯಕಾರಿ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ದೆಹಲಿ ಪೊಲೀಸ್ ಸೈಬರ್ ವಿಭಾಗದ ಅಧಿಕಾರಿಗಳು ರೆಡ್ ಫ್ಲ್ಯಾಗ್ ಪ್ರದರ್ಶಿಸಿದ್ದಾರೆ

ವಂಚಕರು ದೇಶದ ಪ್ರಮುಖ ತನಿಖಾ ಸಂಸ್ಥೆಗಳು (NIA, CBI), ಬ್ಯಾಂಕುಗಳು ಅಥವಾ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲೇ ಫೇಕ್ ಯೂಸರ್ ನೇಮ್  ಮಾಡಿ ಸಾರ್ವಜನಿಕರನ್ನು ಸುಲಭವಾಗಿ ವಂಚಿಸಬಹುದು. ಮೊಬೈಲ್ ಸಂಖ್ಯೆ ಲಭ್ಯವಿಲ್ಲದಿದ್ದರೆ, ವಂಚನೆ ಮಾಡಿದ ಸೈಬರ್ ಅಪರಾಧಿ ಭಾರತದಲ್ಲಿದ್ದಾನೋ ಅಥವಾ ವಿದೇಶದಲ್ಲಿದ್ದಾನೋ ಎಂಬುದನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳಿಗೆ (LEAs) ಭಾರಿ ಹಿನ್ನಡೆಯಾಗಲಿದೆ.

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಹಾಗೂ ಪ್ರಮುಖ ಉದ್ಯಮಿ ಅಂಕುರ್ ವಾರಿಕೂ ಸೇರಿದಂತೆ ಹಲವರು, ಭಾರತದಂತಹ ದೇಶದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ಈ ಫೀಚರ್ ತಂದರೆ ಅದು “ದೊಡ್ಡ ದುರಂತ”ಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಗಳಿಗೆ ಜಿಯೋ ಟಕ್ಕರ್: ಕೇವಲ 799 ರೂಪಾಯಿಗೆ ಹೊಸ ‘JioBharat V4 4G’ ಮೊಬೈಲ್ ಬಿಡುಗಡೆ!; ರೀಚಾರ್ಜ್ ಬೆಲೆಯಲ್ಲೇ ಸಿಗಲಿದೆ ಸೂಪರ್ ಫೋನ್

ಮೆಟಾ ಸಂಸ್ಥೆಗೆ 3 ದಿನಗಳ ಗಡುವು, ಕಠಿಣ ಕ್ರಮದ ಎಚ್ಚರಿಕೆ:

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕರ ಡಿಜಿಟಲ್ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಈ ಫೀಚರ್‌ನ ಸಂಪೂರ್ಣ ಭದ್ರತಾ ನೀಲನಕಾಶೆಯನ್ನು ವಿವರಿಸುವಂತೆ ಮೆಟಾ ಸಂಸ್ಥೆಗೆ ತಿಳಿಸಿದೆ. 3 ದಿನಗಳ ಒಳಗಾಗಿ ಸೂಕ್ತ ವಿವರಣೆ ನೀಡದಿದ್ದರೆ ಹಾಗೂ ಸೈಬರ್ ವಂಚನೆ ತಡೆಗೆ ಗಟ್ಟಿಯಾದ ತಾಂತ್ರಿಕ ವ್ಯವಸ್ಥೆ ರೂಪಿಸದಿದ್ದರೆ ಭಾರತದಲ್ಲಿ ಈ ಫೀಚರ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕಾನೂನು ನೋಟಿಸ್ ಜಾರಿ ಮಾಡುವುದಾಗಿ ಸರ್ಕಾರ ಎಚ್ಚರಿಸಿದೆ. ನೆಟ್‌ ಪರೀಕ್ಷೆಯ ಅಕ್ರಮದ ವೇಳೆ ಟೆಲಿಗ್ರಾಂ ವಿರುದ್ಧ ಕೈಗೊಂಡ ಕಠಿಣ ಕ್ರಮದ ಮಾದರಿಯಲ್ಲೇ ವಾಟ್ಸಾಪ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಖಡಕ್ ಸಂದೇಶ ರವಾನಿಸಿದ್ದಾರೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *