ಭಾರತದಾದ್ಯಂತ ಇರುವ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಗಳಲ್ಲಿ ಸುಮಾರು 9,330 ಕೋಟಿಗೂ ಅಧಿಕ ಹಣ ಹಕ್ಕು ಪಡೆಯದೆಯೇ (Unclaimed) ಉಳಿದುಕೊಂಡಿದೆ. ‘ಇಂಡಿಯಾ ಟುಡೇ’ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ (RTI) ಅರ್ಜಿಗೆ ಪ್ರತಿಕ್ರಿಯಿಸಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO), ಒಟ್ಟು 30.91 ಲಕ್ಷ ನಿಷ್ಕ್ರಿಯ (Inoperative) ಖಾತೆಗಳಲ್ಲಿ ಈ ಬೃಹತ್ ಮೊತ್ತ ಜಮೆಯಾಗಿದೆ ಎಂದು ಬಹಿರಂಗಪಡಿಸಿದೆ.
ಕೇಂದ್ರ ಸರ್ಕಾರವು ಜೂನ್ 29 ರಿಂದ ಜಾರಿಗೆ ಬರುವಂತೆ ಹೊಸ ‘ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, 2026’ ಅನ್ನು ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದ ಬೆನ್ನಲ್ಲೇ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಹೊಸ ನಿಯಮಾವಳಿಯು ಹಳೆಯ 1952 ರ ಇಪಿಎಫ್ ಯೋಜನೆಯನ್ನು ಬದಲಾಯಿಸಿದ್ದು, ಸುಮಾರು 8 ಕೋಟಿ ಸಕ್ರಿಯ ಚಂದಾದಾರರಿಗೆ ಇಪಿಎಫ್ ಪ್ರಕ್ರಿಯೆಗಳನ್ನು ಸರಳಗೊಳಿಸುವ ಮತ್ತು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಉದ್ದೇಶ ಹೊಂದಿದೆ.

ಹಣದ ಪ್ರಮಾಣ ಎಷ್ಟು ದೊಡ್ಡದಿದೆ?
ನಿಷ್ಕ್ರಿಯ ಖಾತೆಗಳಲ್ಲಿ ಬಿದ್ದಿರುವ 9,330 ಕೋಟಿ ರೂ. ಮೊತ್ತ ಎಷ್ಟು ದೊಡ್ಡದು ಎಂಬುದನ್ನು ಅರ್ಥಮಾಡಿಕೊಳ್ಳಲು ವರದಿಯು ಸರ್ಕಾರದ ಕೆಲವು ಪ್ರಮುಖ ಯೋಜನೆಗಳ ವೆಚ್ಚಕ್ಕೆ ಹೋಲಿಸಿದೆ. ಇದು ಕೇಂದ್ರ ಸರ್ಕಾರವು 2016 ರಿಂದ ಪ್ರಾದೇಶಿಕ ವಿಮಾನ ಸಂಪರ್ಕಕ್ಕಾಗಿ ಜಾರಿಗೆ ತಂದಿರುವ ‘ಉಡಾನ್’ (UDAN) ಯೋಜನೆಗೆ ವೆಚ್ಚ ಮಾಡಿರುವ ಒಟ್ಟು ಮೊತ್ತಕ್ಕೆ (10,169 ಕೋಟಿ ರೂ.) ಹತ್ತಿರದಲ್ಲಿದೆ.
ಕೇಂದ್ರ ಸರ್ಕಾರವು 2026-27 ರ ಸಾಲಿನ ಆಯುಷ್ಮಾನ್ ಭಾರತ್ (PM-JAY) ಆರೋಗ್ಯ ಯೋಜನೆಗಾಗಿ ಮೀಸಲಿಟ್ಟಿರುವ ಒಟ್ಟು ಬಜೆಟ್‌ಗೆ ಇದು ಬಹುತೇಕ ಸಮನಾಗಿದೆ. 2014 ರ ಸರ್ಕಾರದ ಅಂದಾಜಿನ ಪ್ರಕಾರ ಒಂದು ಐಐಟಿ (IIT) ಸಂಸ್ಥೆಯನ್ನು ಸ್ಥಾಪಿಸಲು 1,750 ಕೋಟಿ ರೂ. ವೆಚ್ಚವಾಗುತ್ತಿತ್ತು. ಹಣದುಬ್ಬರವನ್ನು ಲೆಕ್ಕ ಹಾಕಿ ನೋಡಿದರೆ, 2026 ರಲ್ಲಿ ಇದರ ವೆಚ್ಚ ಸುಮಾರು 2,934 ಕೋಟಿ ರೂ. ಆಗುತ್ತದೆ. ಅಂದರೆ, ಇಪಿಎಫ್‌ನಲ್ಲಿ ಕ್ಲೈಮ್ ಆಗದೆ ಉಳಿದಿರುವ ಈ ಹಣದಿಂದ ಮೂರು ಹೊಸ ಐಐಟಿ (IIT) ಸಂಸ್ಥೆಗಳನ್ನು ಕಟ್ಟಿ, ಇನ್ನೂ 500 ಕೋಟಿಗೂ ಅಧಿಕ ಹಣವನ್ನು ಉಳಿಸಬಹುದು!
ಹಳೆಯ ದಾಖಲೆಗಳ ಕೊರತೆ:
ಕಳೆದ ಐದು ವರ್ಷಗಳ ದೀರ್ಘಾವಧಿ ಟ್ರೆಂಡ್ ತಿಳಿಯಲು ಇಂಡಿಯಾ ಟುಡೇ ಸಂಸ್ಥೆಯು ವರ್ಷಾವಾರು ಮಾಹಿತಿ ಕೇಳಿತ್ತು. ಆದರೆ ಇಪಿಎಫ್‌ಒ ಕೇವಲ 2025 ಮತ್ತು 2026 ರ ಸಾಲಿನ ಡೇಟಾವನ್ನು ಮಾತ್ರ ನೀಡಿದೆ. “ನಿಷ್ಕ್ರಿಯ ಖಾತೆಗಳ ವಿಭಾಗವನ್ನು (Inoperative Accounts Cell – IAC) 2025-26 ರಲ್ಲಿ ಮಾತ್ರ ಸ್ಥಾಪಿಸಲಾಗಿದ್ದು, ಅದಕ್ಕೂ ಹಿಂದಿನ ವರ್ಷಗಳ ನಿಖರವಾದ ಡೇಟಾವನ್ನು ಈ ವಿಭಾಗವು ನಿರ್ವಹಿಸುತ್ತಿಲ್ಲ” ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಮೇಲಿನ ತಾತ್ಕಾಲಿಕ ನಿಯಂತ್ರಣ ಅಂತ್ಯ: ಜುಲೈ 1ರಿಂದ ಹೊಸ ವ್ಯವಸ್ಥೆ
ಆಧಾರ್ ಲಿಂಕ್ಡ್ ಖಾತೆಗಳ ವಿವರ ನೀಡಲು ನಿರಾಕರಣೆ:
ಅರ್ಜಿದಾರರು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ನಿಷ್ಕ್ರಿಯ ಖಾತೆಗಳ ವಿವರ, ಆ ಖಾತೆಗಳಲ್ಲಿರುವ ಹಣದ ಮೊತ್ತ ಮತ್ತು ಅವುಗಳ ಸ್ವಯಂ-ಪಾವತಿ (Auto-settlement) ಪ್ರಕ್ರಿಯೆಯ ಸ್ಥಿತಿಗತಿಯ ಬಗ್ಗೆಯೂ ಮಾಹಿತಿ ಕೋರಿದ್ದರು. ಆದರೆ ಇಪಿಎಫ್‌ಒ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(e) ಅಡಿಯಲ್ಲಿ ಗ್ರಾಹಕರು ಅಥವಾ ಸದಸ್ಯರೊಂದಿಗೆ ಹೊಂದಿರುವ ‘ವಿಶ್ವಾಸಾರ್ಹ ಸಂಬಂಧದ’ (Fiduciary Relationship) ಆಧಾರದ ಮೇಲೆ ಸಂಗ್ರಹಿಸಿಟ್ಟುಕೊಂಡಿರುವ ಇಂತಹ ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿಯನ್ನು ಮೂರನೇ ವ್ಯಕ್ತಿಗಳಿಗೆ ಬಹಿರಂಗಪಡಿಸಲು ವಿನಾಯಿತಿ ಇದೆ ಎಂದು ಸಂಸ್ಥೆ ಹೇಳಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

