ಥೈಲ್ಯಾಂಡ್‌ನಲ್ಲಿ ಭೀಕರ ದುರಂತ: 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಕಾರು ಡಿಕ್ಕಿ; 9 ಬೌದ್ಧ ಸನ್ಯಾಸಿಗಳು ದಾರುಣ ಸಾವು!

ಬ್ಯಾಂಕಾಕ್ : ಈಶಾನ್ಯ ಥೈಲ್ಯಾಂಡ್‌ನ ಮುಕ್ದಹಾನ್ ಪ್ರಾಂತ್ಯದಲ್ಲಿ ಅತ್ಯಂತ ಆಘಾತಕಾರಿ ಹಾಗೂ ಮನಕಲಕುವ ರಸ್ತೆ ಅಪಘಾತವೊಂದು ಸಂಭವಿಸಿದೆ. ಹೆತ್ತವರ ಅನುಮತಿಯಿಲ್ಲದೆ 11 ವರ್ಷದ ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ತೀರ್ಥಯಾತ್ರೆ ಕೈಗೊಂಡಿದ್ದ ಬೌದ್ಧ ಸನ್ಯಾಸಿಗಳ (Buddhist Monks) ಗುಂಪಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಘೋರ ದುರಂತದಲ್ಲಿ ಒಂಬತ್ತು ಬೌದ್ಧ ಸನ್ಯಾಸಿಗಳು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸುಮಾರು 35 ಬೌದ್ಧ ಸನ್ಯಾಸಿಗಳು ಮತ್ತು ಐದು ಜನ ಸಾಮಾನ್ಯ ಅನುಯಾಯಿಗಳನ್ನೊಳಗೊಂಡ ಭಕ್ತರ ಗುಂಪೊಂದು ಮುಕ್ದಹಾನ್ ಪ್ರಾಂತ್ಯದ ಹೆದ್ದಾರಿಯಲ್ಲಿ ಧಾರ್ಮಿಕ ತೀರ್ಥಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ಸಾಗುತ್ತಿತ್ತು. ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಬದುಕುಳಿದ ಫ್ರಾ ಸೋಂಪಾಂಗ್ ಎಂಬ ಸನ್ಯಾಸಿ ಘಟನೆಯ ಭೀಕರತೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

Advertisement

“ನಾವೆಲ್ಲರೂ ರಸ್ತೆಯ ಬದಿಯಲ್ಲಿ ಅತ್ಯಂತ ಶಿಸ್ತಿನಿಂದ ‘ಬುದ್ಧೋ, ಬುದ್ಧೋ’ ಎಂದು ಧ್ಯಾನ ಮಂತ್ರ ಜಪಿಸುತ್ತಾ ಸಾಗುತ್ತಿದ್ದೆವು. ಈ ವೇಳೆ ಬಾಲಕನೊಬ್ಬ ಓಡಿಸುತ್ತಿದ್ದ ಕಾರು ಅತಿಯಾದ ವೇಗದಿಂದ ಬಂದು ಇದ್ದಕ್ಕಿದ್ದಂತೆ ನಮ್ಮ ಸಾಲಿಗೆ ಅಪ್ಪಳಿಸಿತು. ಮೊದಲ ಸಾಲಿನಲ್ಲಿದ್ದ ಒಂಬತ್ತು ಸನ್ಯಾಸಿಗಳು ಬದುಕುಳಿದರು, ಆದರೆ ಉಳಿದವರು ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದರು,” ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

ಢಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಐವರು ಬೌದ್ಧ ಸನ್ಯಾಸಿಗಳು ರಸ್ತೆಯ ಮೇಲೆಯೇ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಸನ್ಯಾಸಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಇತರ ಗಾಯಾಳುಗಳ ಪೈಕಿ ಮೂವರು ಸನ್ಯಾಸಿಗಳ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರ ನೆಲಸಮ: ಭಾರತದಿಂದ ತೀವ್ರ ಖಂಡನೆ; ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ವಿದೇಶಾಂಗ ಇಲಾಖೆ ಆಗ್ರಹ 

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಹೆತ್ತವರ ಬೇಜವಾಬ್ದಾರಿತನದ ವಿರುದ್ಧ ತನಿಖೆ ಆರಂಭಿಸಿದ್ದಾರೆ. 11 ವರ್ಷದ ಬಾಲಕನ ಹುಚ್ಚುಾಟಕ್ಕೆ ಒಂಬತ್ತು ಪವಿತ್ರ ಜೀವಗಳು ಬಲಿಯಾಗಿರುವುದು ಥೈಲ್ಯಾಂಡ್‌ನಾದ್ಯಂತ ತೀವ್ರ ಶೋಕವನ್ನು ಉಂಟುಮಾಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *