ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಮತ್ತು ಕಲ್ಲಡ್ಕ ನಡುವಿನ ನರಹರಿ ಪರ್ವತದ ಮುಂಭಾಗದಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘೋರ ದುರಂತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರಿನ ಕೊಡಿಪ್ಪಾಡಿ ನಿವಾಸಿ ಅಶೋಕ್ (34) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಬಿಳಿ ಬಣ್ಣದ ಕಾರು (ನೋಂದಣಿ ಸಂಖ್ಯೆ: KA-21-C-4128) ಬಿ.ಸಿ. ರೋಡ್ ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ವನ್ ವೇಯ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ಹೆದ್ದಾರಿಯಲ್ಲಿ ಏಕಮುಖ ಸಂಚಾರ (ಒನ್‌ವೇ) ವ್ಯವಸ್ಥೆ ಜಾರಿಯಲ್ಲಿದ್ದರೂ, ಬೈಕ್ ಸವಾರ ನಿಯಮ ಗಾಳಿಗೆ ತೂರಿ ಸಂಚರಿಸಿದ್ದೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಬಾನೆಟ್, ಗ್ರಿಲ್ ಹಾಗೂ ಇಂಜಿನ್ ಭಾಗ ಸಂಪೂರ್ಣ ಹಾನಿಗೊಳಗಾಗಿದ್ದು, ಮುಂಭಾಗದ ವಿಂಡ್‌ಶೀಲ್ಡ್ ಗ್ಲಾಸ್ ಪುಡಿಪುಡಿಯಾಗಿದೆ. ಇದರೊಂದಿಗೆ ಬೈಕ್‌ನ ಮುಂಭಾಗವೂ ಸಂಪೂರ್ಣವಾಗಿ ನುಜ್ಜುನುಜ್ಜಾಗಿದೆ.
ಅಪಘಾತ ನಡೆದ ತಕ್ಷಣವೇ ಸ್ಥಳೀಯರು ಗಾಯಾಳು ಅಶೋಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

