ನವದೆಹಲಿ/ಮಂಗಳೂರು: ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ–275ರ ಮಾಣಿ–ಸಂಪಾಜೆ ರಸ್ತೆಯ ತುರ್ತು ದುರಸ್ತಿ ಕಾಮಗಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ₹49.22 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ.
ಈ ನಡುವೆ, ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ (4-ಲೇನ್) ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮಂಗಳವಾರ ನವದೆಹಲಿಯಲ್ಲಿ ನಡೆದ ಈ ಭೇಟಿಯಲ್ಲಿ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.
ಕರಾವಳಿ ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಮಾಣಿ–ಸಂಪಾಜೆ ಹೆದ್ದಾರಿ ಮೇಲ್ದರ್ಜೀಕರಣ ಯೋಜನೆಗೆ ರಸ್ತೆ ವಿನ್ಯಾಸ (Alignment) ಹಾಗೂ ಆಡಳಿತಾತ್ಮಕ ಅನುಮೋದನೆಗಳನ್ನು ಶೀಘ್ರ ನೀಡುವಂತೆ ಸಂಸದರು ಒತ್ತಾಯಿಸಿದರು.
ಈ ಯೋಜನೆ ಅನುಷ್ಠಾನಗೊಂಡರೆ ವಾಹನ ಸಂಚಾರ ಸುರಕ್ಷತೆ ಹೆಚ್ಚುವುದರ ಜೊತೆಗೆ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ವ್ಯಾಪಾರ, ಪ್ರವಾಸೋದ್ಯಮ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಉತ್ತೇಜನ ದೊರೆಯಲಿದೆ ಎಂದು ಸಂಸದರು ಕಾರ್ಯದರ್ಶಿಗೆ ವಿವರಿಸಿದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಮಂಗಳೂರಿಗೆ ‘ವಾಕಬಿಲಿಟಿ ಆಡಿಟ್’ ಬೇಡಿಕೆ, ಸಿಎಂ ಡಿಕೆಶಿಗೆ ಸಂಸದ ಚೌಟ ಪತ್ರ
ಇದೇ ಸಂದರ್ಭದಲ್ಲಿ ಮಂಗಳೂರು–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಯ ಪ್ರಗತಿಯ ಕುರಿತೂ ಚರ್ಚೆ ನಡೆಯಿತು. ಯೋಜನೆಯ ಪ್ರಮುಖ ಭಾಗವಾಗಿರುವ ಶಿರಾಡಿ ಘಾಟ್ ವಿಭಾಗದ ಹೊಸ ರಸ್ತೆ ವಿನ್ಯಾಸಕ್ಕೆ ‘ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ’ ಅನುಮೋದನೆ ನೀಡಿರುವುದನ್ನು ಸಂಸದರು ಸ್ವಾಗತಿಸಿದರು.
ಪ್ರಸ್ತುತ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, ಪರಿಸರ, ಅರಣ್ಯ ಹಾಗೂ ವನ್ಯಜೀವಿ ಇಲಾಖೆಗಳ ಅನುಮತಿ ಪಡೆಯುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, “ದಕ್ಷಿಣ ಕನ್ನಡದಲ್ಲಿ ವಿಶ್ವದರ್ಜೆಯ ರಸ್ತೆ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗಬೇಕು. ಉತ್ತಮ ರಸ್ತೆ ಸಂಪರ್ಕವು ಹೂಡಿಕೆ, ಉದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಗೆ ಭದ್ರ ಅಡಿಪಾಯವಾಗಲಿದೆ.
ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಈ ಎಲ್ಲಾ ಪ್ರಮುಖ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವವರೆಗೆ ನಾನು ನಿರಂತರವಾಗಿ ಪ್ರಯತ್ನಿಸುತ್ತೇನೆ” ಎಂದು ಹೇಳಿದರು.
₹49.22 ಕೋಟಿ ಅನುದಾನದಲ್ಲಿ ನಡೆಯುವ ಕಾಮಗಾರಿಗಳು
ಸಂಸದರ ನಿರಂತರ ಪ್ರಯತ್ನದ ಫಲವಾಗಿ, ಕೇಂದ್ರ ಸರ್ಕಾರವು ಮಾಣಿ–ಸಂಪಾಜೆ ವಿಭಾಗದ 71.60 ಕಿ.ಮೀ. ಉದ್ದದ ರಸ್ತೆಯ ತುರ್ತು ದುರಸ್ತಿ ಕಾಮಗಾರಿಗೆ ಇಪಿಸಿ (EPC) ಮಾದರಿಯಲ್ಲಿ ₹49.22 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ.
ಈ ಅನುದಾನದಲ್ಲಿ ರಸ್ತೆ ಸಂಪೂರ್ಣ ಉದ್ದಕ್ಕೂ 40 ಮಿ.ಮೀ. ದಪ್ಪದ ಬಿಟುಮಿನಸ್ ಮೇಲ್ಮೈ ಅಳವಡಿಕೆ, ರಸ್ತೆ ಬದಿಗಳ ನಿರ್ವಹಣೆ, ಸಂಚಾರ ಸೂಚಕ ಫಲಕಗಳ ಅಳವಡಿಕೆ, ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಸಚಿವಾಲಯದಿಂದ ಆರ್ಥಿಕ ಮಂಜೂರಾತಿ ಹಾಗೂ ಟೆಂಡರ್ ದಾಖಲೆಗಳಿಗೆ ಅಂತಿಮ ಅನುಮೋದನೆ ದೊರೆಯುತ್ತಿದ್ದಂತೆಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಇದರ ಜೊತೆಗೆ, ಮಾಣಿ–ಸಂಪಾಜೆ ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಈಗಾಗಲೇ 2026–27ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದೆ.
ಪ್ರಸ್ತುತ ಯೋಜನೆಯ DPR ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ರಸ್ತೆ ವಿನ್ಯಾಸಕ್ಕೆ (Alignment) ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

