‘ಗಡಾಯಿಕಲ್ಲು’ ಚಾರಣಕ್ಕೆ ತಾತ್ಕಾಲಿಕ ನಿಷೇಧ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ, ಗುಡ್ಡ ಕುಸಿತ ಆಗುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ಸಾರ್ವಜನಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಎಲ್ಲೆಲ್ಲಿ ಭಾರಿ ಮಳೆ ಸಾಧ್ಯತೆ?

Advertisement

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಈ ಕೆಳಗಿನ ದಿನಾಂಕಗಳಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ:

ಕರಾವಳಿ ಜಿಲ್ಲೆಗಳು: ಜುಲೈ 9 ಮತ್ತು 10ರಂದು ಅತ್ಯಂತ ಭಾರಿ ಮಳೆಯಾಗುವ ಅಂದಾಜಿದೆ.

ದಕ್ಷಿಣ ಒಳನಾಡು: ಜುಲೈ 9ರಂದು ವಿಸ್ತಾರವಾಗಿ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡು: ಜುಲೈ 8 ಮತ್ತು 9ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಗಮನಿಸಿ: ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಾಳಿಯ ವೇಗವು ಗಂಟೆಗೆ 50-60 ಕಿಲೋ ಮೀಟರ್ ತಲುಪುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ

ರಾಜ್ಯದ ಇನ್ನು ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ:

ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಕೋಲಾರ ಮತ್ತು ರಾಮನಗರ.

ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆ ಸುರಿಯುವ ಅಂದಾಜಿದೆ.

ಇದನ್ನೂ ಓದಿ: ವಯನಾಡು ಸುರಂಗ ಮಾರ್ಗ ಪ್ರದೇಶದಲ್ಲಿ ಭೀಕರ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ

ಗಡಾಯಿಕಲ್ಲು ಪ್ರವೇಶಕ್ಕೆ  ತಾತ್ಕಾಲಿಕ ನಿಷೇಧ 

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣವಾದ ‘ಗಡಾಯಿಕಲ್ಲು ಪ್ರವೇಶಕ್ಕೆ ಜುಲೈ 8 ರಿಂದ ಜಾರಿಗೆ ಬರುವಂತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಡಾಯಿಕಲ್ಲು ಬೆಟ್ಟದ ಕಲ್ಲುಗಳು ಮತ್ತು ಚಾರಣದ ಹಾದಿ ವಿಪರೀತ ಜಾರುತ್ತಿರುವುದರಿಂದ ಚಾರಣ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ.

ಗುಡ್ಡ ಕುಸಿತ ಆಗುವ ಸಾಧ್ಯತೆ

ಇನ್ನು ದಕ್ಷಿಣ ಕನ್ನಡ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಆಗುವ ಸಾಧ್ಯತೆಗಳು ಇದೆ. ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗಿದೆ.ಹೀಗಾಗಿ ಘಾಟಿ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಕಂದಾಯ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *