ವಯನಾಡು ಸುರಂಗ ಮಾರ್ಗ ಪ್ರದೇಶದಲ್ಲಿ ಭೀಕರ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ

ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಸುರಂಗ ಮಾರ್ಗದ (Wayanad Tunnel Project) ಬಳಿ ಭೀಕರ ಭೂಕುಸಿತ (Landslide) ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ. ಇನ್ನು ಸುಮಾರು 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 18 ಮಂದಿ ಭೂಗತ ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ (ಲಾಕ್ ಆಗಿದ್ದಾರೆ) ಎಂದು ತಿಳಿದುಬಂದಿದೆ.

ಮೆಪ್ಪಾಡಿ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಬರೊಬ್ಬರಿ 265 ಮಿ.ಮೀ ನಷ್ಟು ದಾಖಲೆ ಪ್ರಮಾಣದ ಮಳೆಯಾಗಿದೆ. ಇದರ ಪರಿಣಾಮವಾಗಿ ಸುರಂಗ ರಸ್ತೆಗಾಗಿ ನಿರ್ಮಿಸಲಾಗಿದ್ದ ದೈತ್ಯ ಕಾಂಕ್ರೀಟ್ ತಡೆಗೋಡೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಭಾರಿ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ನಿನ್ನೆಯೇ ಸುರಂಗ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದ ಕರಾಳ ಕ್ಷಣದಲ್ಲಿ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಸಾರ್ವಜನಿಕರು ಈ ಪ್ರಕೃತಿ ವಿಕೋಪದ ಸುಳಿಗೆ ಸಿಲುಕಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

Advertisement

ಇದನ್ನೂ ಓದಿ: ವಯನಾಡಿನಲ್ಲಿ ಮತ್ತೆ ಪ್ರಕೃತಿ ವಿಕೋಪ: ಸುನಾಮಿಯಂತೆ ನುಗ್ಗಿಬಂತು ಕೆಸರುಮಣ್ಣು

ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆ

ದುರಂತದ ತೀವ್ರತೆ ಅರಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೃಷಿ ಸಚಿವ ಟಿ. ಸಿದ್ದಿಕ್ ಹಾಗೂ ಕಂದಾಯ ಸಚಿವ ಎ.ಪಿ. ಅನಿಲ್‌ಕುಮಾರ್ ಅವರೊಂದಿಗೆ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಹತ್ತಿರದಿಂದ ಸಂಘಟಿಸಲು ಇಬ್ಬರೂ ಸಚಿವರಿಗೆ ತಕ್ಷಣವೇ ವಯನಾಡಿಗೆ ಧಾವಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಜೊತೆಗೆ, ಮೀನಂಗಡಿಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಘಟಕದೊಂದಿಗೆ ಕೋಝಿಕ್ಕೋಡ್‌ನ ವಿಶೇಷ ರಕ್ಷಣಾ ತಂಡವನ್ನೂ ಸಹ ವಯನಾಡಿಗೆ ರವಾನಿಸಲಾಗಿದ್ದು, ಜಂಟಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

“ಭೂಕುಸಿತದ ತೀವ್ರತೆಗೆ ಹಲವರು ಇನ್ನೂ ನೆಲದಡಿಯಲ್ಲಿ ಸಿಲುಕಿದ್ದಾರೆ. ಆದರೆ, ಘಟನಾ ಸ್ಥಳದಲ್ಲಿ ಹವಾಮಾನ ವಿಪರೀತ ಕೆಟ್ಟದಾಗಿದ್ದು, ಮಣ್ಣು ಇನ್ನೂ ಕುಸಿಯುತ್ತಲೇ ಇದೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ,” ಎಂದು ಸ್ಥಳೀಯ ವಾರ್ಡ್ ಸದಸ್ಯರಾದ ಜಿತಿನ್ ಮೆಪ್ಪಾಡಿ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *