ವಯನಾಡಿನಲ್ಲಿ ಮತ್ತೆ ಪ್ರಕೃತಿ ವಿಕೋಪ: ಸುನಾಮಿಯಂತೆ ನುಗ್ಗಿಬಂತು ಕೆಸರುಮಣ್ಣು

ವಯನಾಡು: ಕೇರಳದ ಮಲೆನಾಡು ಜಿಲ್ಲೆಯಾದ ವಯನಾಡಿನಲ್ಲಿ (Wayanad) ಮತ್ತೊಮ್ಮೆ ಭೀಕರ ಭೂಕುಸಿತ ಸಂಭವಿಸಿದ್ದು, ಇಡೀ ಪ್ರದೇಶವನ್ನು ತಲ್ಲಣಗೊಳಿಸಿದೆ. ಜಿಲ್ಲೆಯ ಮೇಪ್ಪಾಡಿ ಮತ್ತು ಚೂರಲ್​ಮಲ ನಡುವೆ ಇರುವ ಮೀನಾಕ್ಷಿಪಾಲ ಎಂಬಲ್ಲಿ ಈ ದಾರುಣ ಘಟನೆ ನಡೆದಿದ್ದು, ಪ್ರಕೃತಿಯ ವಿಕೋಪದ ಲೈವ್ ದೃಶ್ಯಗಳು ಅಲ್ಲಿನ ಸಿಸಿಕ್ಯಾಮರಾದಲ್ಲಿ (CCTV) ಅತ್ಯಂತ ಭಯಾನಕವಾಗಿ ಸೆರೆಯಾಗಿವೆ.

ಮೀನಾಕ್ಷಿಪಾಲದಲ್ಲಿ ಸಂಭವಿಸಿದ ಈ ಭೂಕುಸಿತವು ಜಲಪ್ರಳಯದಂತೆ ಭಾಸವಾಗುತ್ತಿತ್ತು. ದೈತ್ಯ ಕಲ್ಲುಗಳು ಮತ್ತು ಮರಮುಟ್ಟುಗಳ ಮಿಶ್ರಿತ ಕೆಸರುಮಣ್ಣು ರಸ್ತೆಯುದ್ದಕ್ಕೂ ಸೀಳಿಕೊಂಡು ಕೇವಲ ಸೆಕೆಂಡುಗಳ ಅವಧಿಯಲ್ಲಿ ಸುನಾಮಿಯಂತೆ ನುಗ್ಗಿಬಂದಿದೆ. ಬೆಟ್ಟ ಕುಸಿದು ಜೀವರಾಶಿಯನ್ನೇ ನುಂಗಲು ಬರುತ್ತಿದ್ದ ಭೀಕರ ದೃಶ್ಯವನ್ನು ಕಂಡ ಸ್ಥಳೀಯ ಸಾರ್ವಜನಿಕರು ಮತ್ತು ವಾಹನ ಸವಾರರು ತಮ್ಮ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.

Advertisement

ಇಲ್ಲಿದೆ ನೋಡಿ ವಿಡಿಯೋ; (ವಿಡಿಯೋ ಕೃಪೆ:ಪಿಟಿಐ)

 

ಇದನ್ನೂ ಓದಿ:  2ಕ್ಕಿಂತ ಹೆಚ್ಚು ಮದುವೆ, ಲಸಿಕೆ ನಿರಾಕರಣೆ, ಧಾರ್ಮಿಕ ಶಾಲೆಗೆ ಸೇರಿಸಿದ್ರೆ ಸಿಗಲ್ಲ ಸರ್ಕಾರಿ ಸೌಲಭ್ಯ

ದೈತ್ಯ ಟ್ಯಾಂಕರ್ ಕೊಚ್ಚಿಬಂದರೂ ಪವಾಡಸದೃಶ ರಕ್ಷಣೆ:

ಮಣ್ಣು ಮತ್ತು ಕಲ್ಲುಗಳು ನುಗ್ಗಿಬಂದ ರಭಸ ಎಷ್ಟಿತ್ತೆಂದರೆ ರಸ್ತೆಯಲ್ಲಿದ್ದ ಬೃಹತ್ ಟ್ಯಾಂಕರ್ ಒಂದೇ ಕ್ಷಣದಲ್ಲಿ ತರಗೆಲೆಯಂತೆ ಕೊಚ್ಚಿಬಂದಿದೆ. ಈ ವೇಳೆ ಆ ದೈತ್ಯ ಟ್ಯಾಂಕರ್ ಅಡಿಯಲ್ಲಿ ಸಿಲುಕಿಕೊಂಡಿದ್ದ ಒಬ್ಬ ಮಹಿಳೆ ಹಾಗೂ ಓರ್ವ ಪುರುಷ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮತ್ತೊಂದೆಡೆ ತೀವ್ರ ರಭಸಕ್ಕೆ ಸಿಲುಕಿದ ಖಾಸಗಿ ಬಸ್‌ವೊಂದು ಸಂಪೂರ್ಣವಾಗಿ ಕೊಚ್ಚಿಹೋಗಿ ಹತ್ತಿರದ ಹಳ್ಳಕ್ಕೆ ಬಿದ್ದಿದೆ.

ಘಟನಾ ಸ್ಥಳದಲ್ಲಿ ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಸ್ಥಳೀಯ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಸರುಮಣ್ಣಿನ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆಹಚ್ಚಲಾಗುತ್ತಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕೆಲಸ ಭರದಿಂದ ಸಾಗಿದೆ. ಇಡೀ ವಯನಾಡು ಜಿಲ್ಲೆ ಮತ್ತೊಮ್ಮೆ ಭೂಕುಸಿತದ ಭೀತಿಯಲ್ಲಿ ಮುಳುಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *