ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ಆರ್‌ಸಿಬಿ ಬೌಲರ್‌ಗಳ ಶಿಸ್ತಿನ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್‌ಗಳಿಗೆ ಸೀಮಿತವಾಯಿತು. ತಂಡದ ಪರ ವಾಷಿಂಗ್ಟನ್ ಸುಂದರ್ ಅಜೇಯ 50 ರನ್‌ಗಳೊಂದಿಗೆ ಹೋರಾಟ ನಡೆಸಿದರೆ, ನಿಶಾಂತ್ ಸಿಂಧು 20, ಜೋಸ್ ಬಟ್ಲರ್ 19 ಮತ್ತು ಅರ್ಶದ್ ಖಾನ್ 15 ರನ್‌ಗಳ ಕೊಡುಗೆ ನೀಡಿದರು.
ಆರ್ಸಿಬಿ ಪರ ರಶಿಕ್ ಸಲಾಂ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹಝಲ್‌ವುಡ್ ತಲಾ 2 ವಿಕೆಟ್ ಕಬಳಿಸಿದರು. ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.
ಇದನ್ನೂ ಓದಿ: ರಾಜಸ್ಥಾನ್ ವಿರುದ್ಧ ಶುಭ್ಮನ್ ಗಿಲ್ ನರಸಿಂಹ ಅವತಾರ!: 47 ಎಸೆತಗಳಲ್ಲಿ ಶತಕ, ಸಿಡಿದೆದ್ದ ಗುಜರಾತ್ ನಾಯಕ
156 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಹಂತದಲ್ಲೇ ಕೆಲವು ಆಘಾತಗಳು ಎದುರಾದರೂ, ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ವೆಂಕಟೇಶ್ ಅಯ್ಯರ್ 32 ರನ್ ಗಳಿಸಿ ಉತ್ತಮ ಆರಂಭ ನೀಡಿದರೆ, ಕೊಹ್ಲಿ ಅಜೇಯ 75 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಜತ್ ಪಟಿದಾರ್ 15, ಟಿಮ್ ಡೇವಿಡ್ 24 ಹಾಗೂ ಜಿತೇಶ್ ಶರ್ಮಾ ಅಜೇಯ 11 ರನ್‌ಗಳ ನೆರವಿನಿಂದ ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಗುಜರಾತ್ ಪರ ರಶಿದ್ ಖಾನ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಅರ್ಶದ್ ಖಾನ್ ಹಾಗೂ ಕಗಿಸೊ ರಬಾಡ ತಲಾ 1 ವಿಕೆಟ್ ಕಬಳಿಸಿದರು.
ವಿರಾಟ್ ಕೊಹ್ಲಿಯ ಅಜೇಯ 75 ರನ್‌ಗಳ ಮೌಲ್ಯಯುತ ಇನ್ನಿಂಗ್ಸ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದು ಅಭಿಮಾನಿಗಳಿಗೆ ಸಂಭ್ರಮದ ಕ್ಷಣವನ್ನು ನೀಡಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


