ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದೆ. ಜುಲೈ 9 ರಂದು ಮೆಲ್ಬೋರ್ನ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಭಾರತೀಯ ವಲಸಿಗರ ಬೃಹತ್ ಸಮಾವೇಶದ ಪ್ರಚಾರದ ವೇಳೆ ಫೇಸ್‌ಬುಕ್‌ನಲ್ಲಿ ಪ್ರಧಾನಿಯವರಿಗೆ ಜೀವ ಬೆದರಿಕೆ ಒಡ್ಡಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್ ಆಗಿವೆ.
ಮೆಲ್ಬೋರ್ನ್‌ನ ಪ್ರಸಿದ್ಧ ಮಾರ್ವೆಲ್ ಸ್ಟೇಡಿಯಂನಲ್ಲಿ ‘ಮೆಲ್ಬೋರ್ನ್ ಮೀಟ್ಸ್ ಮೋದಿ’ ಹೆಸರಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಫೇಸ್‌ಬುಕ್ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅಬು ಮುಸ್ತಫಾ ಎಂಬ ಹೆಸರಿನ ಪ್ರೊಫೈಲ್, ಅತ್ಯಂತ ಆಘಾತಕಾರಿ ಸಂದೇಶ ರವಾನಿಸಿದೆ. “ಕಾರ್ಯಕ್ರಮ ನಡೆಯುವಾಗ ಸ್ಟೇಡಿಯಂನ ಮೇಲ್ಛಾವಣಿಯನ್ನು (Roof) ಮುಚ್ಚಿಡುವುದು ಸೂಕ್ತ, ಇಲ್ಲದಿದ್ದರೆ ಅವರು ಆಸ್ಟ್ರೇಲಿಯಾದಲ್ಲೇ ತಮ್ಮ ಸಾವನ್ನು ಕಾಣಬೇಕಾಗುತ್ತದೆ” ಎಂದು ಅರೇಬಿಕ್ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇದು ಕೇವಲ ಬೆದರಿಕೆಯಷ್ಟೇ ಅಲ್ಲದೆ, ಸ್ಟೇಡಿಯಂ ಮೇಲೆ ಮೇಲಿನಿಂದ ದಾಳಿ ನಡೆಸುವ ಮುನ್ಸೂಚನೆಯಂತೆ ಇರುವುದರಿಂದ ಭದ್ರತಾ ಪಡೆಗಳು ಗಂಭೀರವಾಗಿ ಪರಿಗಣಿಸಿವೆ.

‘ದಿ ಆಸ್ಟ್ರೇಲಿಯಾ ಟುಡೇ’ ವರದಿ ಮಾಡಿರುವ ಪ್ರಕಾರ, ಆಸ್ಟ್ರೇಲಿಯಾದ ಉನ್ನತ ತನಿಖಾ ಸಂಸ್ಥೆಗಳು ಪ್ರಕರಣದ ಬೆನ್ನುಬಿದ್ದಿವೆ. ಬೆದರಿಕೆ ಸಂದೇಶ ಹಾಕಲಾದ ಫೇಸ್‌ಬುಕ್ ಖಾತೆಯ ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸವನ್ನು ತನಿಖಾಧಿಕಾರಿಗಳು ಈಗಾಗಲೇ ಪತ್ತೆಹಚ್ಚಿದ್ದಾರೆ. ಆರೋಪಿ ಯಾವ ಸ್ಥಳದಿಂದ ಕುಳಿತು ಈ ಕೃತ್ಯ ಎಸಗಿದ್ದಾನೆ ಎಂಬುದರ ಸಂಪೂರ್ಣ ಮಾಹಿತಿ ಶೀಘ್ರದಲ್ಲೇ ಸಿಗಲಿದ್ದು, ಆಸ್ಟ್ರೇಲಿಯಾ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಲಕ್ನೋ ಬೆನ್ನಲ್ಲೇ ಆಗ್ರಾದಲ್ಲಿ ಮತ್ತೊಂದು ಘೋರ ಕೃತ್ಯ: ಪತಿಯನ್ನು ಕೊಂದು ಬಾತ್‌ರೂಂ ನೆಲದಡಿ ಹೂತು ಪತ್ನಿ ನಾಟಕ!
ಸ್ಟೇಡಿಯಂ ಮೇಲ್ಛಾವಣಿ ಮುಚ್ಚಿ ಎಂದಿದ್ದೇಕೆ?
ಭಾರತದ ಪ್ರಧಾನಿ ನರೇಂದ್ರ ಮೋದಿ ಜುಲೈ 9 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರು ಬರುವ ಮುನ್ನವೇ ಇಂಟರ್‌ನೆಟ್‌ನಲ್ಲಿ ಉಗ್ರ ಸ್ವರೂಪದ ಬೆದರಿಕೆಯೊಂದು ಬಂದಿದೆ. ಮಾರ್ವೆಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದ ಪೋಸ್ಟ್‌ಗೆ ಅಬು ಮುಸ್ತಫಾ ಎಂಬಾತ ಮಾಡಿರುವ ಕಾಮೆಂಟ್ ಈಗ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸೌಂಡ್ ಮಾಡ್ತಿದೆ. “ಸ್ಟೇಡಿಯಂ ರೂಫ್ ಕ್ಲೋಸ್ ಮಾಡಿ, ಇಲ್ಲದಿದ್ರೆ ಮೋದಿ ಆಸ್ಟ್ರೇಲಿಯಾದಲ್ಲೇ ಪ್ರಾಣ ಬಿಡ್ತಾರೆ” ಎಂಬ ಬೆದರಿಕೆಯ ಬೆನ್ನಲ್ಲೇ ಆಸ್ಟ್ರೇಲಿಯಾ ಭದ್ರತಾ ಪಡೆಗಳು ಅಲರ್ಟ್ ಆಗಿವೆ. ಆಸ್ಟ್ರೇಲಿಯಾ ಟುಡೇ ಪ್ರಕಾರ, ಸದ್ಯ ಪೊಲೀಸರು ಆ ಪೋಸ್ಟ್ ಹಾಕಿದವನ ಐಪಿ ಅಡ್ರೆಸ್ ಟ್ರ್ಯಾಕ್ ಮಾಡಿದ್ದು, ಸದ್ಯದಲ್ಲೇ ಕಂಬಿ ಎಣಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

