ಆಗ್ರಾ: ಪತಿಯನ್ನು ಕೊಂದು ನಾಟಕವಾಡಿದ ಸೋನಂ ಮತ್ತು ಸಿಯಾ ಘಟನೆ ಮಾಸುವ ಮುನ್ನವೇ, ಇದೀಗ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ಇಂತಹುದೇ ಮತ್ತೊಂದು ಬೆಚ್ಚಿಬೀಳಿಸುವ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೇ ತನ್ನ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಮನೆಯ ಬಾತ್‌ರೂಂ ನೆಲದಡಿ ಹೂತು ಹಾಕಿ, ಬಳಿಕ ಪತಿ ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ ಘಟನೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.ಘಟನೆ ನಡೆದು ಭೀಕರ 45 ದಿನಗಳ ಬಳಿಕ ಪತ್ನಿ ರೂಬಿ ಶರ್ಮಾ (Ruby Sharma) ಪೊಲೀಸರ ಮುಂದೆ ಸತ್ಯ ಕಕ್ಕಿದ್ದು, ಪೊಲೀಸರು ಹಂತಕಿ ಪತ್ನಿಯನ್ನು ಬಂಧಿಸಿದ್ದಾರೆ.
45 ದಿನಗಳ ಕಾಲ ನಡೆದ ಹೈಡ್ರಾಮಾ:

ರೂಬಿ ಶರ್ಮಾ ತನ್ನ ಪತಿ ಸುರೇಂದ್ರ ಶರ್ಮಾ ಸುಮಾರು ಒಂದೂವರೆ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ನಡೆಯುತ್ತಿದ್ದ ಅವಧಿಯಲ್ಲಿ ರೂಬಿ ಕೂಡ ತನ್ನ ಪತಿಯನ್ನು ಹುಡುಕುವ ನೆಪದಲ್ಲಿ ಪೊಲೀಸರೊಂದಿಗೆ ಸ್ವತಃ ಹುಡುಕಾಟದಲ್ಲಿ ಭಾಗಿಯಾಗುವಂತೆ ದೊಡ್ಡ ನಾಟಕವಾಡಿದ್ದಳು. ನೆರೆಹೊರೆಯವರ ಮುಂದೆ ಕಣ್ಣೀರು ಹಾಕುತ್ತಾ, ಪತಿ ಕಾಣೆಯಾಗಿರುವ ದುಃಖದಲ್ಲಿ ಮುಳುಗಿರುವಂತೆ ನಟಿಸಿ ಎಲ್ಲರ ಸಹಾನುಭೂತಿ ಗಳಿಸಲು ಆಕೆ ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೊಹರಂ ವೇಳೆ 15 ಸಾವಿರ ಜನರನ್ನು ಸಾಯಿಸಲು ಸ್ಕೆಚ್ ಹಾಕಿದ್ದ ವ್ಯಕ್ತಿ ಸೆರೆ
ಸಿಕ್ಕಿಬಿದ್ದಿದ್ದು ಹೇಗೆ?
ಸುರೇಂದ್ರ ಶರ್ಮಾ ಅವರ ಸಹೋದರರಿಗೆ ರೂಬಿಯ ನಡವಳಿಕೆ ಮತ್ತು ಆಕೆಯ ಹೇಳಿಕೆಗಳ ಮೇಲೆ ತೀವ್ರ ಅನುಮಾನಗಳು ಕಾಡತೊಡಗಿದ್ದವು. ಪತಿ ನಾಪತ್ತೆಯಾದ ದಿನದ ಬಗ್ಗೆ ಆಕೆ ನೀಡುತ್ತಿದ್ದ ಮಾಹಿತಿಯಲ್ಲಿ ಪದೇ ಪದೇ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ದೂರು ನೀಡಿದ್ದರು. ಈ ಅನುಮಾನದ ಆಧಾರದ ಮೇಲೆ ಪೊಲೀಸರು ರೂಬಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ 45 ದಿನಗಳ ರಹಸ್ಯ ಬಯಲಾಗಿದೆ. ತಾನೇ ಪತಿಯನ್ನು ಕೊಂದು ಶವವನ್ನು ಬಾತ್‌ರೂಂನ ನೆಲದ ಅಡಿಯಲ್ಲಿ ಹೂತಿಟ್ಟಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.

