SSLC ತೃತೀಯ ಭಾಷೆಗೆ ಮತ್ತೆ ಗ್ರೇಡ್ ವ್ಯವಸ್ಥೆ ತರಲು ಶಿಕ್ಷಣ ಇಲಾಖೆ ಮುಂದು: ಖಾಸಗಿ ಶಾಲಾ ಒಕ್ಕೂಟಗಳ ತೀವ್ರ ವಿರೋಧ

ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ ತೃತೀಯ ಭಾಷೆಗಳ ಮೌಲ್ಯಮಾಪನಕ್ಕೆ ಮತ್ತೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ತೃತೀಯ ಭಾಷೆಗಳಿಗೆ ಇನ್ಮುಂದೆ ಅಂಕಗಳ (Marks) ಬದಲು ಗ್ರೇಡ್ (Grade) ನೀಡುವ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ನೂತನ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ಬಳಿಕ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ಆದರೆ, ಇಲಾಖೆಯ ಈ ನಿರ್ಧಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಖಾಸಗಿ ಸಂಸ್ಥೆಗಳ ಆಕ್ಷೇಪವೇನು?

Advertisement

ತೃತೀಯ ಭಾಷೆಗೆ ಅಂಕಗಳನ್ನು ನೀಡದಿದ್ದರೆ ವಿದ್ಯಾರ್ಥಿಗಳ ನೈಜ ಸಾಧನೆಯನ್ನು ಅಳೆಯಲು ಸಾಧ್ಯವಾಗುವುದಿಲ್ಲ. ಇದು ವಿದ್ಯಾರ್ಥಿಗಳ ಒಟ್ಟು ಶೇಕಡಾವಾರು (Percentage) ಫಲಿತಾಂಶದ ಮೇಲೆ ಪ್ರಭಾವ ಬೀರಲಿದ್ದು, ಮುಂದಿನ ಉನ್ನತ ಶಿಕ್ಷಣದ ಪ್ರವೇಶ ಹಾಗೂ ಶೈಕ್ಷಣಿಕ ಸ್ಪರ್ಧೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿದ್ದ ಪೋಷಕರು:

ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲೇ ಇಲಾಖೆಯು ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆಯನ್ನು ಘೋಷಿಸಿತ್ತು. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿಯಮ ಬದಲಾವಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕಗಳನ್ನೇ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಪರ್ಯಾಯ ವಿದ್ಯುತ್ ವಿತರಣೆ ಜಾಲ: ತೀವ್ರ ವಿರೋಧದ ಬೆನ್ನಲ್ಲೇ ಅರ್ಜಿ ಹಿಂಪಡೆದ ಟಾಟಾ ಪವರ್

ಗೊಂದಲ ಮರುಕಳಿಸದಂತೆ ಇಲಾಖೆ ಪ್ಲಾನ್:

ಕಳೆದ ವರ್ಷದಂತೆ ಈ ಬಾರಿಯೂ ಯಾವುದೇ ಕಾನೂನು ಗೊಂದಲಗಳು ಮರುಕಳಿಸಬಾರದು ಎಂಬ ಕಾರಣಕ್ಕೆ, ಶೈಕ್ಷಣಿಕ ವರ್ಷದ ಆರಂಭದಲ್ಲೇ ಈ ನಿಯಮವನ್ನು ಜಾರಿಗೊಳಿಸಲು ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆ ಆಯುಕ್ತರು, “ಹೈಕೋರ್ಟ್ ನೀಡಿದ್ದ ಆದೇಶವು ಕೇವಲ ಕಳೆದ ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಈ ವರ್ಷ ನಿಯಮ ಜಾರಿಗೊಳಿಸಲು ಯಾವುದೇ ಕಾನೂನು ಅಡ್ಡಿಯಿಲ್ಲ, ಈಗಾಗಲೇ ಈ ಕುರಿತು ಆದೇಶ ಚಾಲ್ತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *