Breaking News

ರೈಲನ್ನೇ ‘ಹನಿಮೂನ್ ರೂಮ್’ ಮಾಡಿದ ದಂಪತಿ!: ಫಸ್ಟ್ ಎಸಿ ಕೋಚ್‌ನಲ್ಲಿ ಬಲೂನ್ ಡೆಕೋರೇಶನ್; ರೋಮ್ಯಾಂಟಿಕ್ ವಿಡಿಯೋ ವೈರಲ್ ಆಗ್ತಿದ್ದಂತೆ ಟಿಟಿಇ ಅಮಾನತು

ಸಿಕಂದರಾಬಾದ್: ಚಲಿಸುವ ರೈಲಿನ ಫಸ್ಟ್ ಎಸಿ ಕಂಪಾರ್ಟ್‌ಮೆಂಟ್ ಅನ್ನು ದಂಪತಿಗಳ ಫಸ್ಟ್​​ ನೈಟ್​​​​​​ಗಾಗಿ ಬಲೂನ್‌ಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲು ಖಾಸಗಿ ಡೆಕೋರೇಟರ್‌ಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (TTE) ಒಬ್ಬರನ್ನು ದಕ್ಷಿಣ ಮಧ್ಯ ರೈಲ್ವೆ (SCR) ಅಮಾನತುಗೊಳಿಸಿದೆ.

ಕಳೆದ ಜುಲೈ 6 ರಂದು ನಂದಿಗ್ರಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ, ತಮ್ಮ ಪ್ರಯಾಣವನ್ನು ಸ್ಮರಣೀಯವಾಗಿಸಲು ಹಾಗೂ ರೈಲಿನಲ್ಲಿ ಫಸ್ಟ್​​ ನೈಟ್​​ ಮಾಡಿಕೊಳ್ಳಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಖಾಸಗಿ ಡೆಕೋರೇಟರ್ ಒಬ್ಬರನ್ನು ಬುಕ್ ಮಾಡಿದ್ದರು. ಆ ಅಲಂಕಾರದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ:

ರೈಲಿನ ಕೂಪ್ (Coupe) ಒಳಗಡೆ ಕೆಂಪು ಮತ್ತು ಬಿಳಿ ಬಣ್ಣದ ಬಲೂನ್‌ಗಳು ಹಾಗೂ ಲೈಟಿಂಗ್ಸ್‌ನಿಂದ ಅದ್ಭುತವಾಗಿ ಅಲಂಕಾರ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಇಲಾಖೆ ತಕ್ಷಣವೇ ತನಿಖೆಗೆ ಆದೇಶಿಸಿದೆ. ಜುಲೈ 8ರ ಬುಧವಾರದಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ದಕ್ಷಿಣ ಮಧ್ಯ ರೈಲ್ವೆ, “ಖಾಸಗಿ ಡೆಕೋರೇಟರ್ ರೈಲಿನ ಒಳಗೆ ಪ್ರವೇಶಿಸಿ ಅಲಂಕಾರ ಮಾಡಿರುವುದು ಸಂಪೂರ್ಣವಾಗಿ ನಿಯಮ ಬಾಹಿರವಾಗಿದ್ದು, ಇದು ಗಂಭೀರ ಕರ್ತವ್ಯ ಲೋಪವಾಗಿದೆ,” ಎಂದು ತಿಳಿಸಿದೆ.

ಇದನ್ನೂ ಓದಿ: ಶಿವಸೇನಾ ಕಾರ್ಪೊರೇಟರ್ ಗೂಂಡಾಗಿರಿಗೆ ಬೆದರಿದ ವೈದ್ಯರು: ಹಲ್ಲೆಗೊಳಗಾದ ಮಹಿಳಾ ವೈದ್ಯೆ ಸೇರಿ ಇಬ್ಬರಿಂದ ರಾಜೀನಾಮೆ; ನಗರವನ್ನೇ ಬಿಟ್ಟು ಪಲಾಯನ

ರೈಲ್ವೆ ಭದ್ರತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ, ಅಪರಿಚಿತ ವ್ಯಕ್ತಿಗೆ ಕೋಚ್ ಒಳಗಡೆ ಅಲಂಕಾರ ಮಾಡಲು ಅನುಮತಿ ನೀಡಿದ ಕಾರಣಕ್ಕಾಗಿ ಸಂಬಂಧಪಟ್ಟ ಟಿಕೆಟ್ ತಪಾಸಕರನ್ನು (TTE) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಪ್ರಸ್ತುತ ಇಲಾಖಾ ತನಿಖೆ ಪ್ರಾರಂಭವಾಗಿದ್ದು, ತನಿಖೆಯ ವರದಿ ಬಂದ ಬಳಿಕ ಈ ಘಟನೆಗೆ ಕಾರಣರಾದ ಇತರರ ಮೇಲೆಯೂ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಎಚ್ಚರಿಸಿದ್ದಾರೆ.ರೈಲ್ವೆಯಲ್ಲಿ ಇಂತಹ ಅಲಂಕಾರಗಳು ಸುರಕ್ಷತೆಗೆ ಧಕ್ಕೆ ತರಬಹುದು ಮತ್ತು ಇತರ ಪ್ರಯಾಣಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಕಟ್ಟುನಿಟ್ಟಾದ ನಿಷೇಧವಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *