ಶಿವಸೇನಾ ಕಾರ್ಪೊರೇಟರ್ ಗೂಂಡಾಗಿರಿಗೆ ಬೆದರಿದ ವೈದ್ಯರು: ಹಲ್ಲೆಗೊಳಗಾದ ಮಹಿಳಾ ವೈದ್ಯೆ ಸೇರಿ ಇಬ್ಬರಿಂದ ರಾಜೀನಾಮೆ; ನಗರವನ್ನೇ ಬಿಟ್ಟು ಪಲಾಯನ

ಮುಂಬೈ: ಮಹಾರಾಷ್ಟ್ರದ ಕಲ್ಯಾಣ್-ಡೊಂಬಿವ್ಲಿ ಮಹಾನಗರ ಪಾಲಿಕೆ (KDMC) ವ್ಯಾಪ್ತಿಯ ಆಸ್ಪತ್ರೆಯಲ್ಲಿ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಮತ್ತು ಆತನ ಬೆಂಬಲಿಗರು ನಡೆಸಿದ ಭೀಕರ ಹಲ್ಲೆಯಿಂದ ಬೇಸತ್ತು ಹಾಗೂ ಪ್ರಾಣಭಯದಿಂದ ಇಬ್ಬರು ಕರ್ತವ್ಯ ನಿರತ ವೈದ್ಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ನಗರವನ್ನೇ ತೊರೆದಿದ್ದಾರೆ.

ಕಾರ್ಪೊರೇಟರ್‌ನಿಂದ ಥಳಿತಕ್ಕೊಳಗಾಗಿದ್ದ ವೈದ್ಯ ವೈಭವ್ ಸಾಳುಂಕೆ ಬುಧವಾರವೇ ಕೆಲಸ ಬಿಟ್ಟು ಊರು ತೊರೆದಿದ್ದರು. ಇದರ ಬೆನ್ನಲ್ಲೇ, ಘಟನೆಯ ವೇಳೆ ದೌರ್ಜನ್ಯಕ್ಕೊಳಗಾಗಿದ್ದ ಮಹಿಳಾ ವೈದ್ಯೆ ಸೃಷ್ಟಿ ಬಾವಿಸ್ಕರ್ ಸಹ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Advertisement

“ಗೂಂಡಾಗಳು ನಮ್ಮ ಮೇಲೆ ಕಣ್ಣಿಟ್ಟಿದ್ದಾರೆ, ತೀವ್ರ ಭಯವಾಗುತ್ತಿದೆ!”

ನಗರ ತೊರೆಯುವ ಮುನ್ನ ಆತಂಕ ಹಂಚಿಕೊಂಡ ವೈದ್ಯ ವೈಭವ್ ಸಾಳುಂಕೆ, “ನಾನು ತೀವ್ರ ಪ್ರಾಣಭಯದಿಂದಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಗೂಂಡಾಗಳು ನಿರಂತರವಾಗಿ ನಮ್ಮ ಮೇಲೆ ಕಣ್ಣಿಟ್ಟಿದ್ದಾರೆ. ನಾನು ಈಗಾಗಲೇ ನಗರವನ್ನು ಬಿಟ್ಟು ಹೊರಟು ಬಂದಿದ್ದೇನೆ. ಅವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು. ಇತರ ವೈದ್ಯರು ಅಲ್ಲಿ ಕೆಲಸ ಮುಂದುವರಿಸಬಹುದೇನೋ, ಆದರೆ ನನ್ನಿಂದ ಸಾಧ್ಯವಿಲ್ಲ. ನಾನು ಮತ್ತೆಂದೂ ಆ ಆಸ್ಪತ್ರೆಗೆ ಮರಳಿ ಹೋಗುವುದಿಲ್ಲ,” ಎಂದು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:


ರಾಜೀನಾಮೆ ತಲುಪಿಲ್ಲ ಎಂದ ಕೆಡಿಎಂಸಿ :

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಕಲ್ಯಾಣ್-ಡೊಂಬಿವ್ಲಿ ಪಾಲಿಕೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ದೀಪಾ ಶುಕ್ಲಾ, “ವೈದ್ಯರಾದ ವೈಭವ್ ಸಾಳುಂಕೆ ಮತ್ತು ಸೃಷ್ಟಿ ಬಾವಿಸ್ಕರ್ ಅವರು ನಮಗೆ ಯಾವುದೇ ಅಧಿಕೃತ ರಾಜೀನಾಮೆ ಪತ್ರ ನೀಡಿಲ್ಲ. ಇವರಿಬ್ಬರನ್ನೂ ಹೊರಗುತ್ತಿಗೆ  ಸಂಸ್ಥೆಯ ಮೂಲಕ ಆಸ್ಪತ್ರೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಆ ಸಂಸ್ಥೆಗೂ ಇವರು ರಾಜೀನಾಮೆ ಸಲ್ಲಿಸಿಲ್ಲ. ಸದ್ಯ ಇಬ್ಬರೂ ಯಾವುದೇ ಮುನ್ಸೂಚನೆ ನೀಡದೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊಯಿಕ್ಕೋಡ್ ರೈಲ್ವೆ ನಿಲ್ದಾಣದ ಶತಮಾನದ ಹಳೆಯ ಕ್ಲಾಕ್ ಟವರ್ ಕುಸಿತ; ಕೂದಲೆಳೆಯಲ್ಲಿ ತಪ್ಪಿದ ಭಾರಿ ದುರಂತ

ಗಲಾಟೆಗೆ ಕಾರಣವೇನು?

ಡೊಂಬಿವ್ಲಿಯ ಶಾಸ್ತ್ರಿ ನಗರ ಮುನ್ಸಿಪಲ್ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದರ ಚಿಕಿತ್ಸೆಗಾಗಿ ಪೋಷಕರು ಬಂದಿದ್ದರು. ಆದರೆ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಸಂಪೂರ್ಣ ಭರ್ತಿಯಾಗಿದ್ದರಿಂದ, ಮಗುವನ್ನು ಬೇರೆ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದರು.

ಇದರಿಂದ ಆಕ್ರೋಶಗೊಂಡ ಪೋಷಕರು ಸ್ಥಳೀಯ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆಗೆ ದೂರು ನೀಡಿದ್ದರು. ತಕ್ಷಣವೇ ತನ್ನ ಬೆಂಬಲಿಗರೊಂದಿಗೆ ಆಸ್ಪತ್ರೆಗೆ ನುಗ್ಗಿದ ಮ್ಹಾತ್ರೆ, ವೈದ್ಯರೊಂದಿಗೆ ಜಗಳ ತೆಗೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ, ಕಾರ್ಪೊರೇಟರ್ ಮ್ಹಾತ್ರೆ ಮಹಿಳಾ ವೈದ್ಯೆಯ ತಲೆಗೆ ಹಿಂದಿನಿಂದ ಜೋರಾಗಿ ಹೊಡೆಯುವುದು ಮತ್ತು ನಂತರ ಮತ್ತೊಬ್ಬ ವೈದ್ಯ ವೈಭವ್ ಹಾಗೂ ಇತರೆ ಸಿಬ್ಬಂದಿಗಳ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ಸಾರ್ವಜನಿಕ ಆಕ್ರೋಶ; ಆರೋಪಿಗೆ ರಾಜ ಮರ್ಯಾದೆ?

ವಿಡಿಯೋ ವೈರಲ್ ಆಗಿ ದೇಶಾದ್ಯಂತ ಹಾಗೂ ಭಾರತೀಯ ವೈದ್ಯಕೀಯ ಮಂಡಳಿ (IMA) ವತಿಯಿಂದ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ಕಾರ್ಪೊರೇಟರ್ ರಮೇಶ್ ಮ್ಹಾತ್ರೆಯನ್ನು ಬಂಧಿಸಿದ್ದರು. ಆದರೆ, ಬಂಧನದ ಬೆನ್ನಲ್ಲೇ ತನಗೆ ಆರೋಗ್ಯ ಸರಿ ಇಲ್ಲ ಎಂಬ ನೆಪವೊಡ್ಡಿ ಆತ ಠಾಣೆ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಧಿಕಾರ ಬಲ ಬಳಸಿ ಹಂತಕ ಕಾರ್ಪೊರೇಟರ್ ಆಸ್ಪತ್ರೆಯಲ್ಲಿ ‘ರಾಜ ಮರ್ಯಾದೆ’ ಹಾಗೂ ವಿಶೇಷ ಸೌಲಭ್ಯ ಪಡೆಯುತ್ತಿದ್ದಾನೆ ಎಂದು ವೈದ್ಯಕೀಯ ವಲಯ ತೀವ್ರ ಅಸಮಾಧಾನ ಹೊರಹಾಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *