ವೆನ್‌ಲಾಕ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ: ರೋಗಿ ರೆಫರ್ ಮಾಡುವ ಮೊದಲು ಲಭ್ಯತೆ ಪರಿಶೀಲಿಸಲು ಸೂಚನೆ

wenlock-hospital-icu-bed-shortage-mangaluru

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರಿಗೆ ಐಸಿಯು ಬೆಡ್‌ಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಹೊರ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕಳುಹಿಸುವ ಮೊದಲು ಐಸಿಯು ಬೆಡ್ ಲಭ್ಯತೆಯನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳುವಂತೆ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಸಾದ್ ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಈಗಾಗಲೇ ಸಹಾಯವಾಣಿ (Help Desk) ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಐಸಿಯು ಸೇರಿದಂತೆ ಬೆಡ್‌ಗಳ ಲಭ್ಯತೆಯ ಮಾಹಿತಿಯನ್ನು ಆಸ್ಪತ್ರೆಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಟ್ಟು 116 ಐಸಿಯು ಬೆಡ್‌ಗಳಿದ್ದರೂ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (AB-ARK) ಯೋಜನೆಯಡಿ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಿರಂತರವಾಗಿ ಬೆಡ್ ಕೊರತೆ ಎದುರಾಗುತ್ತಿದೆ ಎಂದು ಹೇಳಿದರು. ವೆಂಟಿಲೇಟರ್‌ನಲ್ಲಿರುವ ಗಂಭೀರ ರೋಗಿಗಳನ್ನು ಯಾವುದೇ ಪೂರ್ವ ಮಾಹಿತಿ ಇಲ್ಲದೆ ನೇರವಾಗಿ ಕರೆತರುವುದು ಚಿಕಿತ್ಸೆಯ ಮೇಲೆಯೇ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ 27,937 ಒಳರೋಗಿಗಳು ಹಾಗೂ 2,76,543 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 12,147 ಒಳರೋಗಿಗಳು ಮತ್ತು 1,46,974 ಹೊರರೋಗಿಗಳು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಉಳಿದವರು ರಾಜ್ಯದ ಇತರೆ ಜಿಲ್ಲೆಗಳು ಹಾಗೂ ಕೇರಳದಿಂದ ಆಗಮಿಸಿರುವವರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಅಂಬೆಗಾಲಿಡುವ ವಯಸ್ಸಲ್ಲೇ ನೊಬೆಲ್ ವರ್ಲ್ಡ್ ರೆಕಾರ್ಡ್: ವಿಜಯಪುರದ 10 ತಿಂಗಳ ಮಗುವಿನ ಸಾಧನೆ; 21 ಮೆಟ್ಟಿಲು ಹತ್ತಲು ತಗೊಂಡಿದ್ದು ಜಸ್ಟ್ 36 ಸೆಕೆಂಡ್

ಆಸ್ಪತ್ರೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹೆಚ್ಚುವರಿ 50 ಐಸಿಯು ಬೆಡ್‌ಗಳು ಹಾಗೂ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಜೊತೆಗೆ, ಜಿಲ್ಲೆಗಳ ನಡುವೆ ರೋಗಿಗಳನ್ನು ರೆಫರ್ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ 10 ಅಂಶಗಳ ಮಾರ್ಗಸೂಚಿ ಜಾರಿಗೊಳಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದರು.

ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, AB-ARK ಯೋಜನೆಯಡಿ ರೆಫರ್ ಆಗುವ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಯಾವುದೇ ಶುಲ್ಕ ವಸೂಲಿ ಮಾಡಬಾರದು ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಜಿಲ್ಲೆಗಳ ನಡುವಿನ ರೋಗಿಗಳ ರೆಫರಲ್‌ಗೆ ರಾಜ್ಯ ಮಟ್ಟದಲ್ಲಿ ಸಮರ್ಪಕ ಮತ್ತು ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಯಾಗಬೇಕೆಂದು ಒತ್ತಾಯಿಸಿದರು.

ಡಾ. ಶಿವಪ್ರಸಾದ್ ಅವರು ಪ್ರಧಾನಮಂತ್ರಿ ರಾಹತ್ (PM Rahat) ಯೋಜನೆಯಡಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೊದಲ ಯಶಸ್ವಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು. ರಸ್ತೆ ಅಪಘಾತದಲ್ಲಿ ಗಾಯಗೊಂಡವರು iRAD/e-DAR ಪೋರ್ಟಲ್‌ನಲ್ಲಿ 24 ಗಂಟೆಯೊಳಗೆ ನೋಂದಣಿ ಮಾಡಿಕೊಂಡರೆ, ದಾಖಲೆಗಳನ್ನು ಸಲ್ಲಿಸದೇ ಒಂದು ವಾರದವರೆಗೆ ನಗದು ರಹಿತ ತುರ್ತು ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ ₹1.5 ಲಕ್ಷದವರೆಗೆ ಹಾಗೂ ಗಂಭೀರ ಗಾಯಗಳ ಪ್ರಕರಣಗಳಲ್ಲಿ ₹2.5 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸಲಾಗುತ್ತದೆ. ಈ ಸೌಲಭ್ಯ APL ಹಾಗೂ BPL ಕಾರ್ಡ್‌ದಾರರಿಗೆ ಲಭ್ಯವಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *