E20 ಪೆಟ್ರೋಲ್‌ನಿಂದ ಮೈಲೇಜ್ ಕಮ್ಮಿ ಆಯ್ತು ಎಂದ ಪ್ರಸಿದ್ಧ ವ್ಲಾಗರ್ ಸೌರವ್ ಜೋಶಿ; ತಿರುಗೇಟು ನೀಡಿದ ಮೆರ್ಸಿಡಿಸ್ ಬೆಂಝ್

ದೆಹಲಿ: ದೇಶದ ಜನಪ್ರಿಯ ಲೈಫ್‌ಸ್ಟೈಲ್ ವ್ಲಾಗರ್ (Vlogger) ಸೌರವ್ ಜೋಶಿ ಅವರು ತಮ್ಮ ಐಷಾರಾಮಿ ಮೆರ್ಸಿಡಿಸ್ ಬೆಂಝ್ ಜಿಎಲ್‌ಸಿ (Mercedes-Benz GLC) ಎಸ್‌ಯುವಿ ಕಾರಿನ ಮೈಲೇಜ್ ಕುರಿತು ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವ E20 (ಶೇ. 20 ರಷ್ಟು ಎಥನಾಲ್ ಮಿಶ್ರಿತ) ಪೆಟ್ರೋಲ್ ಬಳಸಿದ್ದರಿಂದಲೇ ತಮ್ಮ ಕಾರಿನ ಮೈಲೇಜ್ ದಿಢೀರ್ ಕುಸಿದಿದೆ ಎಂದು ಸೌರವ್ ಜೋಶಿ ಗಂಭೀರ ಆರೋಪ ಮಾಡಿದ್ದರು.

ಆದರೆ, ಈ ಹರಡುತ್ತಿರುವ ಆತಂಕಕ್ಕೆ ಜಾಗತಿಕ ಐಷಾರಾಮಿ ಕಾರು ಸಂಸ್ಥೆ ಮೆರ್ಸಿಡಿಸ್ ಬೆಂಝ್ ಇಂಡಿಯಾ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಯೂಟ್ಯೂಬರ್‌ಗೆ ನೇರ ತಿರುಗೇಟು ನೀಡಿದೆ.

ಇಲ್ಲಿದೆ ನೋಡಿ ವಿಡಿಯೋ:

ವ್ಲಾಗ್‌ನಲ್ಲಿ ಸೌರವ್ ಜೋಶಿ ಮಾಡಿದ್ದ ಆ ಆರೋಪವೇನು?:

ಇತ್ತೀಚೆಗೆ ಸೌರವ್ ಜೋಶಿ ಹಂಚಿಕೊಂಡಿದ್ದ ವ್ಲಾಗ್‌ನಲ್ಲಿ, ತಮ್ಮ ಮೆರ್ಸಿಡಿಸ್ ಕಾರಿಗೆ E20 ಪೆಟ್ರೋಲ್ ಹಾಕಿಸಿದ ನಂತರ ಕಾರಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಮೈಲೇಜ್ ಪ್ರಮಾಣವು ಪ್ರತಿ ಲೀಟರ್‌ಗೆ 16-17 ಕಿಲೋಮೀಟರ್‌ನಿಂದ (kmpl) ನೇರವಾಗಿ ಕೇವಲ 5 ಕಿಲೋಮೀಟರ್‌ಗೆ ಕುಸಿದಿರುವುದನ್ನು ತೋರಿಸಿದ್ದರು.

E20 ಪೆಟ್ರೋಲ್‌ನಿಂದ ಕಾರಿನ ಇಂಜಿನ್‌ಗೆ ಹಾನಿಯಾಗಬಹುದು ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಹಲ್ದ್ವಾನಿಯಿಂದ ದೆಹಲಿಯ ಸರ್ವಿಸ್ ಸೆಂಟರ್‌ಗೆ ಕಾರನ್ನು ಸಾಗಿಸುವ ತಲೆನೋವಿನ ಬಗ್ಗೆಯೂ ವಿಡಿಯೋದಲ್ಲಿ ಅಸಮಾಧಾನ ಹೊರಹಾಕಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಾಹನ ಸವಾರರಲ್ಲಿ ದೊಡ್ಡ ಗೊಂದಲ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಕಸದಿಂದ ರಸ: ಭವಿಷ್ಯದಲ್ಲಿ ದೆಹಲಿ ಬಸ್‌ಗಳು ಘನತ್ಯಾಜ್ಯದಿಂದ ಉತ್ಪಾದಿಸಿದ ‘ಹೈಡ್ರೋಜನ್’ ಇಂಧನದಿಂದ ಚಲಿಸಲಿವೆ ; ನಿತಿನ್ ಗಡ್ಕರಿ

ಸ್ಪಷ್ಟನೆ ನೀಡಿದ ಮೆರ್ಸಿಡಿಸ್ ಬೆಂಝ್:

ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ತೀವ್ರ ಕಳವಳಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಮೆರ್ಸಿಡಿಸ್ ಬೆಂಝ್ ಇಂಡಿಯಾ, ವ್ಲಾಗರ್ ಜೋಶಿ ಅವರ ವಾದವನ್ನು ತಳ್ಳಿಹಾಕಿದೆ.

“ಮೆರ್ಸಿಡಿಸ್ ಬೆಂಝ್ ಸಂಸ್ಥೆಗೆ ಗ್ರಾಹಕರ ಸುರಕ್ಷತೆ, ವಾಹನದ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆ ಅತ್ಯಂತ ಪ್ರಮುಖವಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ನಮ್ಮ ಎಲ್ಲಾ ಆಧುನಿಕ ಬಿಎಸ್-VI (BS VI) ಪೆಟ್ರೋಲ್ ವಾಹನಗಳು E20 ಇಂಧನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ (Compatible) ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಂದಲೂ ಪ್ರಮಾಣೀಕರಣ ಸಿಕ್ಕಿದೆ. ಗ್ರಾಹಕರಿಗೆ ಯಾವುದೇ ತಾಂತ್ರಿಕ ಪ್ರಶ್ನೆಗಳಿದ್ದಲ್ಲಿ ನೆರವಾಗಲು ನಾವು ಸದಾ ಸಿದ್ಧರಿದ್ದೇವೆ. ಸುಸ್ಥಿರ ಚಲನಶೀಲತೆಗೆ (Sustainable Mobility) ನಮ್ಮ ಸಂಸ್ಥೆ ಬದ್ಧವಾಗಿದೆ.”

ತಾಂತ್ರಿಕ ತಪಾಸಣೆ ಇಲ್ಲದೆ ಆರೋಪ ಮಾಡುವುದು ತಪ್ಪು

ಆಟೋಮೊಬೈಲ್ ತಜ್ಞರ ಪ್ರಕಾರ, ಕಾರೊಂದರ ಮೈಲೇಜ್ 17 ರಿಂದ 5 ಕ್ಕೆ ಇಳಿಯಲು ಕೇವಲ E20 ಇಂಧನವೇ ಕಾರಣ ಎಂದು ತೀರ್ಮಾನಿಸುವುದು ತಾಂತ್ರಿಕವಾಗಿ ತಪ್ಪು. ಆಧುನಿಕ ಕಾರುಗಳ ಮೈಲೇಜ್ ಚಾಲನಾ ಅಭ್ಯಾಸ, ಟ್ರಾಫಿಕ್‌ನ ಐಡ್ಲಿಂಗ್ ಸಮಯ, ಎಲೆಕ್ಟ್ರಾನಿಕ್ ಸೆನ್ಸಾರ್‌ಗಳು ಹಾಗೂ ಸುತ್ತಮುತ್ತಲಿನ ಹವಾಮಾನದ ಮೇಲೆ ನಿರ್ಧಾರವಾಗುತ್ತದೆ.

ಯಾವುದೇ ಅಧಿಕೃತ ಇಂಜಿನ್ ಚೆಕ್, ಇಂಧನದ ಸ್ಯಾಂಪಲ್ ಟೆಸ್ಟ್ ಅಥವಾ ಓಬಿಡಿ ಸ್ಕ್ಯಾನ್ ಮಾಡದೆ, ಕೇವಲ ಡ್ಯಾಶ್‌ಬೋರ್ಡ್ ರೀಡಿಂಗ್ ನೋಡಿ ಇಡೀ ದೇಶದ ಇಂಧನ ನೀತಿಯ ಮೇಲೆ ಗೂಬೆ ಕೂರಿಸುವುದು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವುದು ತಪ್ಪು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *