ಮಾಲೀಕನ ಸಾವಿನ ಬೆನ್ನಲ್ಲೇ ಪ್ರಾಣಬಿಟ್ಟ ನಿಷ್ಠಾವಂತ ಶ್ವಾನ; ಒಂದೇ ದಿನ ಇಬ್ಬರ ಅಂತ್ಯಸಂಸ್ಕಾರ ಮಾಡಿ ಕಣ್ಣೀರಿಟ್ಟ ಕುಟುಂಬ

ಬೇತುಲ್: “ವಿಶ್ವಾಸಕ್ಕೆ ಇನ್ನೊಂದು ಹೆಸರೇ ನಾಯಿ” ಎಂಬ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಆದರೆ, ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಮನುಷ್ಯ ಮತ್ತು ಮೂಕಪ್ರಾಣಿಯ ನಡುವಿನ ಅಪೂರ್ವ ಬಾಂಧವ್ಯಕ್ಕೆ ಸಾಕ್ಷಿಯಾಗುವಂತಹ ಅತ್ಯಂತ ಕಣ್ಣೀರು ತರಿಸುವ ಘಟನೆಯೊಂದು ನಡೆದಿದೆ. ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟ ಮಾಲೀಕನ ಶವಯಾತ್ರೆ ಆರಂಭವಾಗುತ್ತಿದ್ದಂತೆಯೇ, ಅವರ ನಿಷ್ಠಾವಂತ ಸಾಕುನಾಯಿ ‘ದುಗ್ಗು’ ಕೂಡ ಸ್ಥಳದಲ್ಲೇ ಪ್ರಾಣಬಿಟ್ಟು ತನ್ನ ಸ್ವಾಮಿಭಕ್ತಿ ಮೆರೆದಿದೆ.

15 ವರ್ಷಗಳ ಕಾಲ ತನ್ನ ಯಜಮಾನನ ನೆರಳಿನಂತೆ ಬದುಕಿದ್ದ ಶ್ವಾನ, ಅವರ ಸಾವನ್ನು ತಡೆಯಲಾರದೆ ಕೊನೆಯುಸಿರೆಳೆದಿದ್ದು, ಇಡೀ ಗ್ರಾಮವೇ ಕಣ್ಣೀರು ಹಾಕುವಂತೆ ಮಾಡಿದೆ.

ಸಿವಿಲ್ ಲೈನ್ಸ್ ನಿವಾಸಿ ಪ್ರದೀಪ್ ಜೈನ್ (67) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಭೋಪಾಲ್‌ನ ಐಮ್ಸ್ (AIIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಮಂಗಳವಾರ ಸಂಜೆ ಮನೆಗೆ ತರಲಾಯಿತು. ಪ್ರದೀಪ್ ಅವರ ಸಾವಿನಿಂದ ಇಡೀ ಕುಟುಂಬ ದುಃಖದಲ್ಲಿ ಮುಳುಗಿದ್ದರೆ, ಇತ್ತ ಕಳೆದ 15 ವರ್ಷಗಳಿಂದ ಅವರ ಒಡನಾಡಿಯಾಗಿದ್ದ ಸಾಕುನಾಯಿ ‘ದುಗ್ಗು’ ಮಾತ್ರ ತನ್ನ ಯಜಮಾನನ ಸಾವನ್ನು ಮುಂಚಿತವಾಗಿಯೇ ಗ್ರಹಿಸಿದಂತಿತ್ತು.

ಪ್ರದೀಪ್ ಅವರ ಸಹೋದರ ದಿಲೀಪ್ ಜೈನ್ ಹೇಳುವಂತೆ, “ದುಗ್ಗು ನಮ್ಮ ಮನೆಯ ಸಾಕುಪ್ರಾಣಿಯಾಗಿರಲಿಲ್ಲ, ಬದಲಿಗೆ ನಮ್ಮ ಕುಟುಂಬದ ಒಬ್ಬ ಸದಸ್ಯನಾಗಿದ್ದ. ಪ್ರದೀಪ್ ಅಂಗಡಿಯಿಂದ ಬರುವುದನ್ನೇ ಅದು ದಿನಾಲೂ ಬಾಗಿಲಲ್ಲಿ ಕಾಯುತ್ತಿತ್ತು. ಪ್ರದೀಪ್ ಊಟಕ್ಕೆ ಕುಳಿತ ಮೇಲೆಯೇ ಅದು ಊಟ ಮಾಡುತ್ತಿತ್ತು. ಕಳೆದ ಒಂದೂವರೆ ತಿಂಗಳಿನಿಂದ ಪ್ರದೀಪ್ ಅನಾರೋಗ್ಯಕ್ಕೆ ಒಳಗಾದಾಗಿನಿಂದ ದುಗ್ಗು ಕೂಡ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಪ್ರದೀಪ್ ಆರೋಗ್ಯ ಚೇತರಿಸಿಕೊಂಡರೆ ಇದು ಕೂಡ ಖುಷಿಯಾಗುತ್ತಿತ್ತು.”

ಯಜಮಾನನ ಮೃತದೇಹ ನೋಡಿ ಕಣ್ಣೀರಿಟ್ಟ ಶ್ವಾನ:

ಮಂಗಳವಾರ ಸಂಜೆ ಪ್ರದೀಪ್ ಅವರ ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆಯೇ ದುಗ್ಗು ವಿಲವಿಲನೆ ಒದ್ದಾಡಲು ತೊಡಗಿತು. ಜೋರಾಗಿ ಅಳುತ್ತಾ, ಯಜಮಾನನ ದೇಹದ ಹತ್ತಿರ ಹೋಗಲು ಪ್ರಯತ್ನಿಸಿತು. ಅದರ ಆಕ್ರಂದನವನ್ನು ತಡೆಯಲಾಗದೆ ಕುಟುಂಬಸ್ಥರು ಅದನ್ನು ಪಕ್ಕದ ಕೋಣೆಯಲ್ಲಿ ಕೂಡಿ ಹಾಕಿದ್ದರು. ರಾತ್ರಿಯಿಡೀ ಅದು ಆಹಾರ ಮುಟ್ಟದೆ, ಯಜಮಾನನ ಪರಿಚಿತ ಧ್ವನಿಗಾಗಿ ಹಂಬಲಿಸುತ್ತಾ ಕೋಣೆಯಲ್ಲೇ ಒದ್ದಾಡಿದೆ.

ಬುಧವಾರ ಬೆಳಗ್ಗೆ ಶವಯಾತ್ರೆ ಆರಂಭವಾಗುವ ಮುನ್ನ ಕುಟುಂಬಸ್ಥರು ದುಗ್ಗುಗೆ ತನ್ನ ಯಜಮಾನನನ್ನು ಕೊನೆಯ ಬಾರಿ ನೋಡಲು ಅವಕಾಶ ಮಾಡಿಕೊಟ್ಟರು. ನಿಶ್ಯಕ್ತನಾಗಿದ್ದ ದುಗ್ಗು ಮೆಲ್ಲನೆ ನಡೆದು ಬಂದು ಪ್ರದೀಪ್ ಅವರ ತಲೆಯ ಸನಿಹ ನಿಂತು ಪ್ರದಕ್ಷಿಣೆ ಹಾಕಿ, ಕೊನೆಯದಾಗಿ ವಿದಾಯ ಹೇಳಿತು.

ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಪೂಜೆ, ಅಭಿಷೇಕ; ವೈರಲ್ ವಿಡಿಯೋ ಬೆನ್ನಲ್ಲೇ ಸತ್ಯ ಬಿಚ್ಚಿಟ್ಟ ಭಾರತೀಯ ರೈಲ್ವೆ

ಶವಯಾತ್ರೆಯ ಹಿಂದೆಯೇ ಸಾಗಿ ಪ್ರಾಣಬಿಟ್ಟ ಮೂಕಪ್ರಾಣಿ

ಅಂತಿಮ ವಿಧಿವಿಧಾನಗಳಿಗಾಗಿ ಪ್ರದೀಪ್ ಜೈನ್ ಅವರ ಪಾಡೆ (bier) ಎತ್ತಿ ಶವಯಾತ್ರೆ ಆರಂಭವಾಗುತ್ತಿದ್ದಂತೆಯೇ, ಕೋಣೆಯಿಂದ ಹೊರಬಂದ ದುಗ್ಗು ಕೂಡ ಶವಯಾತ್ರೆಯ ಹಿಂದೆಯೇ ಮೌನವಾಗಿ ಹೆಜ್ಜೆ ಹಾಕಲಾರಂಭಿಸಿತು. ಆದರೆ, ಸ್ವಲ್ಪ ದೂರ ಸಾಗುವಷ್ಟರಲ್ಲಿ ದುಗ್ಗು ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು. ನೆರೆದಿದ್ದ ನೂರಾರು ಜನರ ಕಣ್ಣೆದುರಲ್ಲೇ ಆ ನಿಷ್ಠಾವಂತ ಶ್ವಾನ ತನ್ನ ಯಜಮಾನನ ಅಗಲಿಕೆಯ ದುಃಖ ತಾಳಲಾರದೆ ಕೊನೆಯುಸಿರೆಳೆಯಿತು.

ಈ ದೃಶ್ಯವನ್ನು ಕಂಡ ಇಡೀ ಜೈನ್ ಕುಟುಂಬ ಹಾಗೂ ನೆರೆಹೊರೆಯವರು ಜೋರಾಗಿ ಕಣ್ಣೀರು ಹಾಕಿದರು. ಒಂದೇ ದಿನ ಇಬ್ಬರು ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರು ಶವಯಾತ್ರೆಯನ್ನು ಕೆಲಕಾಲ ನಿಲ್ಲಿಸಿ, ದುಗ್ಗುಗೆ ಮತ್ತೊಂದು ಪ್ರತ್ಯೇಕ ಪಾಡೆಯನ್ನು (bier) ಸಿದ್ಧಪಡಿಸಿದರು.

ಒಟ್ಟಿಗೆ ಸಾಗಿದ ಅಂತಿಮಯಾತ್ರೆ:

ಹಿಂದೂ ಧರ್ಮದ ಸಂಪ್ರದಾಯದಂತೆ ಪ್ರದೀಪ್ ಜೈನ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಅದೇ ಚಿತಾಗಾರ ಮೈದಾನದ ಪಕ್ಕದಲ್ಲೇ ದುಗ್ಗು ಕಳೇಬರವನ್ನು ಅತ್ಯಂತ ಗೌರವಪೂರ್ವಕವಾಗಿ ಮಣ್ಣು ಮಾಡಲಾಯಿತು. ತಮ್ಮದೇ ಸ್ವಂತ ಮಗುವನ್ನು ಕಳೆದುಕೊಂಡರೆ ಹೇಗೆ ಬೀಳ್ಕೊಡುತ್ತಾರೋ, ಅದೇ ಪ್ರೀತಿ ಹಾಗೂ ಕಣ್ಣೀರಿನೊಂದಿಗೆ ಕುಟುಂಬಸ್ಥರು ತಮ್ಮ ನೆಚ್ಚಿನ ಶ್ವಾನಕ್ಕೆ ಅಂತಿಮ ವಿದಾಯ ಹೇಳಿದರು.

ಕಾಲ ಬದಲಾದಂತೆ ಮನುಷ್ಯರ ಸಂಬಂಧಗಳೇ ದೂರವಾಗುತ್ತಿರುವ ಈ ದಿನಗಳಲ್ಲಿ, ಮಾಲೀಕನಿಗಾಗಿ ಪ್ರಾಣವನ್ನೇ ಬಿಟ್ಟ ಈ ಮೂಕಪ್ರಾಣಿಯ ನಿಷ್ಠೆ ಮತ್ತು ಪ್ರೀತಿ ಇಡೀ ಜಗತ್ತಿಗೆ ಒಂದು ಮೂಕ ಸಂದೇಶ ನೀಡುವಂತಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *