ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಜ್ಯೋತಿ’ ಯೋಜನೆ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಇಂಧನ ಇಲಾಖೆಯು ಕೆಲವು ಪ್ರಮುಖ ಸರಳೀಕರಣ ಕ್ರಮಗಳನ್ನು ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು, ಬಾಡಿಗೆದಾರರಲ್ಲಿ ಕಾಡುತ್ತಿದ್ದ ಗೊಂದಲಗಳ ನಿವಾರಣೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಓಸಿ (OC) ಮತ್ತು ಸಿಸಿ (CC) ವಿನಾಯಿತಿಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೊಸ ಮನೆಗೆ ಶಿಫ್ಟ್ ಆಗುವ ಅಥವಾ ಬಾಡಿಗೆದಾರರು ಬದಲಾಗುವ ಸಂದರ್ಭದಲ್ಲಿ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿದ್ದ ಗೊಂದಲಕ್ಕೆ ಸಚಿವರು ಮಹತ್ವದ ಪರಿಹಾರ ನೀಡಿದ್ದಾರೆ. “ಒಂದು ವೇಳೆ ಮನೆಯ ಬಾಡಿಗೆದಾರರು ಬದಲಾವಣೆ ಹೊಂದಿದರೆ, ಹಳೆಯ ಬಾಡಿಗೆದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುವುದು. ಅವರ ಜಾಗದಲ್ಲಿ ಹೊಸದಾಗಿ ಮನೆಗೆ ಬಂದಿರುವ ಬಾಡಿಗೆದಾರರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವಂತೆ ಲಿಂಕ್ ಮಾಡಲು ಇಲಾಖೆಯು ಸೂಕ್ತ ತಾಂತ್ರಿಕ ಕ್ರಮ ಕೈಗೊಳ್ಳಲಿದೆ,” ಎಂದು ಸಚಿವರು ಭರವಸೆ ನೀಡಿದರು.
ಅನಧಿಕೃತವಾಗಿ ಅಥವಾ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವ ಪ್ರವೃತ್ತಿಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಇಂಧನ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಸದ್ಯಕ್ಕೆ 2,400 ಚದರ ಅಡಿವರೆಗಿನ ನಿವೇಶನ ಮತ್ತು ಕಟ್ಟಡಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಮತ್ತು ಸಿಸಿ ಕಡ್ಡಾಯ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ.
“2,400 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ದೊಡ್ಡ ನಿವೇಶನಗಳಿಗೂ ಈ ವಿನಾಯಿತಿಯನ್ನು ವಿಸ್ತರಿಸುವ ಯೋಚನೆ ಇದೆ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು,” ಎಂದರು. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಓಸಿ ನಿಯಮವನ್ನು ಸಡಿಲಗೊಳಿಸಲಾಗಿದೆ. ಆದರೆ, ಟ್ರಾನ್ಸ್ಫಾರ್ಮರ್ಗಳಿಗೆ ನಿಗದಿಪಡಿಸಲಾಗಿರುವ ಅಧಿಕೃತ ಶುಲ್ಕವನ್ನು ರೈತರು ಇಲಾಖೆಗೆ ಪಾವತಿಸಬೇಕಾಗುತ್ತದೆ.
ಬೆಂಗಳೂರಿನ ಪಾದಚಾರಿ ಮಾರ್ಗಗಳಲ್ಲಿ ಬೆಸ್ಕಾಂ ಟ್ರಾನ್ಸ್ಫಾರ್ಮರ್ಗಳು ಅಡ್ಡಿಯಾಗುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಬೆಸ್ಕಾಂ ಇಲಾಖೆಯಿಂದ ಎಲ್ಲಾದರೂ ಫುಟ್ಪಾತ್ ಒತ್ತುವರಿಯಾಗಿದ್ದರೆ ನನ್ನ ಗಮನಕ್ಕೆ ತನ್ನಿ, ಪಾದಚಾರಿಗಳಿಗೆ ಕಷ್ಟವಾಗುತ್ತಿದ್ದರೆ ಖಂಡಿತಾ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಹಾಗಂತ ಫುಟ್ಪಾತ್ ಮೇಲೆ ಇರುವ ಇಲಾಖೆಯ ಟ್ರಾನ್ಸ್ಫಾರ್ಮರ್ ಸೇರಿದಂತೆ ಇತರೆ ವಸ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ನಾವು ಅದನ್ನೆಲ್ಲಾ ತೆಗೆದುಬಿಟ್ಟರೆ ನಾಳೆ ನಿಮ್ಮ ಟಿವಿ ಸ್ಟುಡಿಯೋಗಳಿಗೂ ಕರೆಂಟ್ ಕೊಡಲು ಆಗಲ್ಲ, ಆಗ ಏನು ಮಾಡ್ತೀರಾ? ನಮ್ಮಲ್ಲಿ ಇಂಜಿನಿಯರ್ಗಳು, ಅಧಿಕಾರಿಗಳಿದ್ದಾರೆ. ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಅವರ ಬಳಿ ಹೇಳಿ ಸರಿಪಡಿಸಿಕೊಳ್ಳಿ. ಪ್ರತಿಯೊಂದಕ್ಕೂ ಸಚಿವರನ್ನೇ ಪ್ರಶ್ನೆ ಮಾಡಿದರೆ ಹೇಗೆ? ಅವರು ಸ್ಪಂದಿಸದಿದ್ದರೆ ಮಾತ್ರ ನನ್ನ ಬಳಿ ಬನ್ನಿ. ನಿಮಗೆ 24 ಗಂಟೆ ಬ್ರೇಕಿಂಗ್ ನ್ಯೂಸ್ ಕೊಡಲು ನಾನೇ ಸಿಕ್ಕಿದ್ದೇನೆ ಅಂದುಕೊಂಡಿದ್ದೀರಾ?” ಎಂದು ಸಚಿವರು ಚಾಟಿ ಬೀಸಿದರು.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಬಿ. ದಯಾನಂದಗೆ ಬಿಗ್ ರಿಲೀಫ್: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

