ಹಲ್ಲಿನ ಸೋಂಕನ್ನು ನಿರ್ಲಕ್ಷಿಸಿದರೆ ಮೆದುಳಿಗೆ ತಟ್ಟಬಹುದು ಗಂಡಾಂತರ!: ಅಪರೂಪವಾದ್ರೂ ಪ್ರಾಣಕ್ಕೆ ಕುತ್ತು ತರಬಲ್ಲದು ಟೂತ್ ಇನ್ಫೆಕ್ಷನ್

ದೆಹಲಿ: ಹಲ್ಲಿನ ನೋವು ಅಥವಾ ಸೋಂಕು (Tooth Infection) ಎನ್ನುವುದು ಮೊದಲಿಗೆ ಒಂದು ಸಣ್ಣ ದಂತ ಸಮಸ್ಯೆಯಾಗಿ ಕಾಣಿಸಬಹುದು. ಆದರೆ, ಇದಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದರೆ, ಇದು ಇಡೀ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಹಲ್ಲಿನ ಸೋಂಕುಗಳು ಹಲ್ಲು ಅಥವಾ ಒಸಡುಗಳಿಗೆ ಮಾತ್ರ ಸೀಮಿತವಾಗಿರುತ್ತವೆ ಮತ್ತು ದಂತವೈದ್ಯರಿಂದ ಯಶಸ್ವಿಯಾಗಿ ಗುಣಮುಖವಾಗುತ್ತವೆ. ಆದರೆ, ಕೆಲವು ಅಪರೂಪದ ಪ್ರಕರಣಗಳಲ್ಲಿ ಈ ಸೋಂಕು ದೇಹದ ಇತರ ಭಾಗಗಳಿಗೆ, ವಿಶೇಷವಾಗಿ ಮೆದುಳಿಗೆ (Brain) ಹರಡಿ ಜೀವಕ್ಕೆ ಕುತ್ತು ತರುವಂತಹ ಗಂಭೀರ ಪರಿಸ್ಥಿತಿಯನ್ನು ನಿರ್ಮಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಹಲ್ಲಿನ ಸೋಂಕು ಮೆದುಳನ್ನು ತಲುಪುವುದು ಹೇಗೆ?:

ಹೌದು, ಹಲ್ಲಿನ ಸೋಂಕು ಮೆದುಳನ್ನು ತಲುಪಲು ಸಾಧ್ಯವಿದೆ. ಶಾರದಾಕೇರ್ ಹೆಲ್ತ್‌ಸಿಟಿಯ ನ್ಯೂರಾಲಜಿ ವಿಭಾಗದ ಹಿರಿಯ ಕನ್ಸಲ್ಟೆಂಟ್ ಆದ ಡಾ. ವಿಶಾಲ್ ಜೈನ್ ಅವರ ಪ್ರಕಾರ, ತೀವ್ರವಾದ ಹಲ್ಲಿನ ಸೋಂಕಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಬ್ಯಾಕ್ಟೀರಿಯಾಗಳು ರಕ್ತದ ಹರಿವಿನ ಮೂಲಕ ಅಥವಾ ಮುಖದ ಅಂಗಾಂಶಗಳ ಮೂಲಕ ಮೆದುಳನ್ನು ಪ್ರವೇಶಿಸುತ್ತವೆ.

ಫರಿದಾಬಾದ್‌ನ ಸರ್ವೋದಯ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಯಾವರ್ ಶೋಯಿಬ್ ಅಲಿ ಅವರು ವಿವರಿಸುವಂತೆ, ಮುಖದಲ್ಲಿರುವ ಕೆಲವು ರಕ್ತನಾಳಗಳಿಗೆ ಕವಾಟಗಳು ಇರುವುದಿಲ್ಲ. ಇದರಿಂದಾಗಿ ಹಲ್ಲು ಅಥವಾ ಒಸಡಿನ ಸೋಂಕಿನ ಬ್ಯಾಕ್ಟೀರಿಯಾಗಳು ಸುಲಭವಾಗಿ ತಲೆಬುರುಡೆ ಹಾಗೂ ಮೆದುಳಿನ ಕಡೆಗೆ ಹಿಮ್ಮುಖವಾಗಿ ಚಲಿಸಲು ಸಾಧ್ಯವಾಗುತ್ತದೆ. ಇದು ಅತ್ಯಂತ ಗಂಭೀರವಾದ ಮೆದುಳಿನ ಸೋಂಕಿಗೆ ಕಾರಣವಾಗಬಹುದು.

ಇದು ಯಾವ ರೀತಿಯ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು?:

ಹಲ್ಲಿನ ಬ್ಯಾಕ್ಟೀರಿಯಾಗಳು ಮೆದುಳನ್ನು ತಲುಪಿದಾಗ ಉಂಟಾಗುವ ಪ್ರಮುಖ ಮಾರಣಾಂತಿಕ ಕಾಯಿಲೆಗಳು:

ಬ್ರೈನ್ ಅಬ್ಸೆಸ್ : ಸೋಂಕಿನ ಕಾರಣದಿಂದಾಗಿ ಮೆದುಳಿನ ಒಳಗೆ ಕೀವು ತುಂಬಿದ ಚೀಲ ಅಥವಾ ಪಾಕೆಟ್ ನಿರ್ಮಾಣವಾಗುವುದು.

ಮೆನಿಂಜೈಟಿಸ್ : ಮೆದುಳು ಮತ್ತು ಬೆನ್ನುಹುರಿಯನ್ನು ರಕ್ಷಿಸುವ ಪೊರೆಗಳಿಗೆ ತಗಲುವ ತೀವ್ರವಾದ ಸೋಂಕು.

ಇತರ ಗಂಭೀರ ಸೋಂಕುಗಳು: ಅಪರೂಪದ ಸಂದರ್ಭಗಳಲ್ಲಿ ಈ ಬ್ಯಾಕ್ಟೀರಿಯಾಗಳು ದೇಹದ ಬಹು ಅಂಗಾಂಗಗಳ ವೈಫಲ್ಯಕ್ಕೂ ಕಾರಣವಾಗಬಹುದು.

ಈ ಎರಡೂ ಸಮಸ್ಯೆಗಳು ತುರ್ತು ವೈದ್ಯಕೀಯ ಪರಿಸ್ಥಿತಿಗಳಾಗಿದ್ದು , ತಕ್ಷಣದ ಚಿಕಿತ್ಸೆ ಸಿಗದಿದ್ದರೆ ಕೆಲವೇ ದಿನಗಳಲ್ಲಿ ಜೀವಕ್ಕೆ ಅಪಾಯ ಉಂಟುಮಾಡಬಹುದು.

ಯಾರಿಗೆ ಅಪಾಯದ ಸಾಧ್ಯತೆ ಹೆಚ್ಚು?:

ಅನಾರೋಗ್ಯಕರ ಹಲ್ಲಿನ ಸೋಂಕು ಯಾರಿಗೆ ಬೇಕಾದರೂ ತೊಂದರೆ ನೀಡಬಹುದು. ಆದರೆ ಈ ಕೆಳಗಿನವರಲ್ಲಿ ಸೋಂಕು ವೇಗವಾಗಿ ಹರಡುತ್ತದೆ:

ರೋಗನಿರೋಧಕ ಶಕ್ತಿ ಕಡಿಮೆ ಇರುವವರು (Weakened Immune System).

ನಿಯಂತ್ರಣದಲ್ಲಿಲ್ಲದ ಮಧುಮೇಹ (Uncontrolled Diabetes) ಹೊಂದಿರುವವರು.

ಹಲ್ಲಿನ ಚಿಕಿತ್ಸೆಯನ್ನು ಸುಮ್ಮನೆ ಮುಂದೂಡುವವರು.

ನೀವು ಎಂದಿಗೂ ನಿರ್ಲಕ್ಷಿಸಬಾರದ ಎಚ್ಚರಿಕೆ ಲಕ್ಷಣಗಳು:

ಆರಂಭಿಕ ಲಕ್ಷಣಗಳು:

ನಿರಂತರ ಅಥವಾ ತೀವ್ರವಾದ ಹಲ್ಲು ನೋವು

ಒಸಡುಗಳು, ಮುಖ ಅಥವಾ ದವಡೆ ಊದಿಕೊಳ್ಳುವುದು

ಸೋಂಕಿತ ಜಾಗದಿಂದ ಕೀವು ಸೋರುವುದು

ಜ್ವರ, ಆಹಾರ ನುಂಗಲು ತೊಂದರೆ ಮತ್ತು ಬಾಯಿ ತೆರೆಯಲು ಕಷ್ಟವಾಗುವುದು

ಸೋಂಕು ಮೆದುಳಿಗೆ ಹರಡಿದಾಗ ಕಾಣಿಸಿಕೊಳ್ಳುವ ಗಂಭೀರ ಲಕ್ಷಣಗಳು:

ತೀವ್ರವಾದ ತಲೆನೋವು ಮತ್ತು ವಾಂತಿ

ಗೊಂದಲ ಅಥವಾ ಅತಿಯಾದ ತೂಕಡಿಕೆ

ದೃಷ್ಟಿಯಲ್ಲಿ ಬದಲಾವಣೆ ಮತ್ತು ಕಣ್ಣುಗಳ ಸುತ್ತ ಊತ

ಫಿಟ್ಸ್ ಅಥವಾ ಅಪಸ್ಮಾರ

ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಬೇಕು.

ಒಸಡಿನ ಕಾಯಿಲೆ ಹಾಗೂ ಹಲ್ಲಿನಲ್ಲಿ ಕೀವು ತುಂಬಿದ್ದರೂ ನಿರ್ಲಕ್ಷಿಸುವವರು.

ರೋಗನಿರ್ಣಯ ಮತ್ತು ಚಿಕಿತ್ಸೆ ಹೇಗೆ?:

ಸೋಂಕು ಮೆದುಳಿಗೆ ಹರಡಿರುವ ಶಂಕೆ ಇದ್ದರೆ, ವೈದ್ಯರು MRI ಅಥವಾ CT ಸ್ಕ್ಯಾನ್ ಮೂಲಕ ಬ್ರೈನ್ ಅಬ್ಸೆಸ್ ಅನ್ನು ಪತ್ತೆಹಚ್ಚುತ್ತಾರೆ. ಮೆನಿಂಜೈಟಿಸ್ ಪತ್ತೆಹಚ್ಚಲು ಬೆನ್ನುಹುರಿಯ ದ್ರವವನ್ನು ಪರೀಕ್ಷಿಸಲಾಗುತ್ತದೆ.

ಸಾಮಾನ್ಯ ಸೋಂಕಿಗೆ: ಹಲ್ಲಿನ ಕೀರನ್ನು ಹೊರತೆಗೆದು, ಆಂಟಿಬಯೋಟಿಕ್ಸ್ ನೀಡಲಾಗುತ್ತದೆ.

ಮೆದುಳಿನ ಸೋಂಕಿಗೆ: ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಇಂಟ್ರಾವೆನಸ್ ಆಂಟಿಬಯೋಟಿಕ್ಸ್ ನೀಡಲಾಗುತ್ತದೆ. ಬ್ರೈನ್ ಅಬ್ಸೆಸ್ ಆಗಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಕೀರನ್ನು ಹೊರತೆಗೆಯಬೇಕಾಗುತ್ತದೆ.

ಇದನ್ನೂ ಓದಿ: ಇನ್ಮುಂದೆ 15 ನಿಮಿಷದಲ್ಲಿ 108 ಆ್ಯಂಬುಲೆನ್ಸ್ ಬರದಿದ್ರೆ 5,000 ರೂ. ಭಾರಿ ದಂಡ

ಡೆಗಟ್ಟುವುದು ಹೇಗೆ?:

“ಈ ಗಂಭೀರ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ನಿಯಮಿತ ದಂತ ತಪಾಸಣೆ, ಹಲ್ಲಿನ ಕ್ಯಾವಿಟಿ ಹಾಗೂ ಒಸಡಿನ ಕಾಯಿಲೆಗಳಿಗೆ ತಕ್ಷಣ ಚಿಕಿತ್ಸೆ ಪಡೆಯುವುದರಿಂದ ಅಪಾಯವನ್ನು ಶೇ. 100 ರಷ್ಟು ಕಡಿಮೆ ಮಾಡಬಹುದು,” ಎನ್ನುತ್ತಾರೆ ಡಾ. ಜೈನ್.

ಹಲ್ಲಿನ ನೋವನ್ನು ಕೇವಲ ಮಾತ್ರೆ ತಿಂದು ಹತ್ತಿಕ್ಕುವ ಬದಲು, ನೋವಿನ ಮೂಲ ಕಾರಣವನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಅತ್ಯಂತ ಸುಲಭ ಮಾರ್ಗವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *