ಬಂಟ್ವಾಳ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸತ್ಯ ಬಹಿರಂಗಪಡಿಸಿದ ಎಸ್‌ಪಿ ಅರುಣ್ ಕೆ

ಮಂಗಳೂರು: ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‌ನಲ್ಲಿ ನಡೆದ 21 ವರ್ಷದ ಯುವತಿ ಲಾವಣ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕೆ. ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಲಾವಣ್ಯಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಚೇತನ್‌ನನ್ನು ಈಗಾಗಲೇ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು, ಆತ ಯುವತಿಯ ಸಂಬಂಧಿಯಾಗಿದ್ದ ಹಾಗೂ ಏಕಪಕ್ಷೀಯ ಪ್ರೇಮದ ಹಿನ್ನೆಲೆಯಲ್ಲಿ ಈ ಘೋರ ಕೃತ್ಯ ಎಸಗಿದ್ದಾನೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್‌ಪಿ ಅರುಣ್ ಕೆ. ಅವರು ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಜುಲೈ 16ರ ಗುರುವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಕೊಲೆ ನಡೆದಿದೆ. 21 ವರ್ಷದ ಯುವತಿ ಲಾವಣ್ಯಳನ್ನು ಅಪರಿಚಿತ ವ್ಯಕ್ತಿಯೊಬ್ಬ ಮಚ್ಚಿನಿಂದ ಅತ್ಯಂತ ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿದ್ದ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95-26 ರಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 126 ಮತ್ತು 103 ರ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ. ಎಸ್‌ಪಿ ಅವರ ಸೂಚನೆಯ ಮೇರೆಗೆ ಆರೋಪಿಯ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ತಕ್ಷಣವೇ ರಚಿಸಲಾಯಿತು.

ಪೊಲೀಸರ ಈ ತ್ವರಿತ ಕಾರ್ಯಾಚರಣೆಯ ಫಲವಾಗಿ ಕೊಲೆಗಡುಕ ಚೇತನ್‌ನನ್ನು ಯಶಸ್ವಿಯಾಗಿ ವಶಕ್ಕೆ ಪಡೆದು ಬಂಧಿಸಲಾಗಿದೆ. ಪೊಲೀಸ್ ವಿಚಾರಣೆಯ ವೇಳೆ ಕೊಲೆಗೆ ಇರದಿದ್ದ ನಿಖರ ಕಾರಣ ಬಹಿರಂಗವಾಗಿದೆ. ಬಂಧಿತ ಆರೋಪಿ ಚೇತನ್ ಸಂತ್ರಸ್ತೆ ಲಾವಣ್ಯಳ ಸಂಬಂಧಿಯಾಗಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಿ.ಸಿ. ರೋಡ್ ಲಾವಣ್ಯ ಹತ್ಯೆ ಪ್ರಕರಣ: ಕೊಲೆಗಡುಕ ಚೇತನ್‌ ಬಂಧನ
ಚೇತನ್ ಲಾವಣ್ಯಳನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ (One-sided love). ಆದರೆ ಈ ಪ್ರೀತಿಯ ಪ್ರಸ್ತಾಪಕ್ಕೆ ಲಾವಣ್ಯ ಒಪ್ಪಿಗೆ ಸೂಚಿಸಿರಲಿಲ್ಲ. ಈ ಕೋಪ ಮತ್ತು ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಚೇತನ್ ಇಷ್ಟೊಂದು ದಾರುಣ ಹಾಗೂ ಭೀಕರ ಹೆಜ್ಜೆಯನ್ನಿಟ್ಟು ಯುವತಿಯನ್ನು ಹತ್ಯೆ ಮಾಡಿದ್ದಾನೆ ಎಂದು ಎಸ್‌ಪಿ ಅರುಣ್ ಕೆ. ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಬಂಟ್ವಾಳ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *