ಜಾನ್‌ಪುರ: ಶತಮಾನಗಳ ಕಾಲದ ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗೆ ಆಧುನಿಕ ವೈದ್ಯಕೀಯದ ಸ್ಪರ್ಶ ಸಿಕ್ಕರೆ ಹೇಗಿರುತ್ತದೆ? ಇಂತಹದ್ದೇ ಒಂದು ರೋಚಕ ಹಾಗೂ ವಿಶಿಷ್ಟ ಸಂಪ್ರದಾಯ ಉತ್ತರ ಪ್ರದೇಶದ ಜಾನ್‌ಪುರದಲ್ಲಿ ನಡೆದಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಜಾನ್‌ಪುರದ ಪ್ರಸಿದ್ಧ ‘ರಾಸ್ ಮಂಡಲ್ ಜಗನ್ನಾಥ ದೇವಾಲಯ’ಕ್ಕೆ ಹಿರಿಯ ತಜ್ಞ ವೈದ್ಯರ ತಂಡವೊಂದು ಭೇಟಿ ನೀಡಿ, ಸ್ವತಃ ಜಗನ್ನಾಥ ಸ್ವಾಮಿಗೆ ಸಾಂಪ್ರದಾಯಿಕ ವೈದ್ಯಕೀಯ ತಪಾಸಣೆ (Health Checkup) ನಡೆಸಿ ಸುದ್ದಿಯಾಗಿದೆ.
ಸ್ವಾಮಿಯ ಆರೋಗ್ಯ ತಪಾಸಣೆಯ ನಂತರ ವೈದ್ಯರು “ಲಾರ್ಡ್ ಜಗನ್ನಾಥ್ ಈಸ್ ಕಂಪ್ಲೀಟ್ಲಿ ಹೆಲ್ದಿ” (ದೇವರು ಸಂಪೂರ್ಣ ಗುಣಮುಖರಾಗಿದ್ದಾರೆ) ಎಂದು ಘೋಷಿಸಿದ್ದು, ಭಕ್ತರಲ್ಲಿ ಅಪಾರ ಹರ್ಷ ತಂದಿದೆ. ಇದು ಮುಂಬರುವ ಭವ್ಯ ರಥಯಾತ್ರೆ ಮಹೋತ್ಸವಕ್ಕೆ ಸಕಲ ಹಾದಿಯನ್ನೂ ಸುಗಮಗೊಳಿಸಿದೆ.
ಸನಾತನ ಧರ್ಮದ ಪ್ರಾಚೀನ ಸಂಪ್ರದಾಯದ ಪ್ರಕಾರ, ಜಗನ್ನಾಥ ಸ್ವಾಮಿಯು ತನ್ನ ಒಡಹುಟ್ಟಿದವರಾದ ಬಲಭದ್ರ ಮತ್ತು ಸುಭದ್ರೆಯರೊಂದಿಗೆ ಜ್ಯೇಷ್ಠ ನಡೆಯುವ ಭವ್ಯ ‘ಸ್ನಾನ ಪೂರ್ಣಿಮೆ’ಯ (Snana Purnima) ಜಲಕ್ರೀಡೆ ಆಚರಣೆಯ ನಂತರ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬ ಬಲವಾದ ನಂಬಿಕೆಯಿದೆ.
ಈ ಸುದೀರ್ಘ ಸ್ನಾನದ ಆಚರಣೆಯಿಂದಾಗಿ ಮೂರೂ ದೇವತೆಗಳಿಗೆ ‘ದೈವಿಕ ಜ್ವರ’ ಬರುತ್ತದೆ ಎಂದು ನಂಬಲಾಗುತ್ತದೆ. ಈ ಕಾರಣಕ್ಕಾಗಿ ಅವರನ್ನು ಸಾರ್ವಜನಿಕರ ದರ್ಶನದಿಂದ ದೂರವಿಟ್ಟು, ಸುಮಾರು 15 ದಿನಗಳ ಕಾಲ ದೇವಾಲಯದ ಆವರಣದ ರಹಸ್ಯ ಕೋಣೆಯಲ್ಲಿ ಏಕಾಂತದಲ್ಲಿ ಇರಿಸಲಾಗುತ್ತದೆ. ಈ ಅವಧಿಯನ್ನು ‘ಅಣವಸರ’ ಎಂದು ಕರೆಯಲಾಗುತ್ತದೆ.
ಇಲ್ಲಿದೆ ನೋಡಿ ಸ್ಟೋರಿ:
View this post on Instagram
ಅಣವಸರ ಅವಧಿಯಲ್ಲಿ ದೇವಾಲಯದ ಬಾಗಿಲುಗಳು ಸಂಪೂರ್ಣ ಮುಚ್ಚಿರುತ್ತವೆ ಮತ್ತು ಭಕ್ತರಿಗೆ ದರ್ಶನ ಭಾಗ್ಯವಿರುವುದಿಲ್ಲ. ಈ ಸಮಯದಲ್ಲಿ ದೇವರಿಗೆ ಮನುಷ್ಯರಂತೆಯೇ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಗಳು, ಆಯುರ್ವೇದ ಕಷಾಯಗಳು ಮತ್ತು ಪಥ್ಯದ ಆಹಾರವನ್ನು (ನಿಯಂತ್ರಿತ ಡಯಟ್) ನೀಡಿ ಉಪಚರಿಸಲಾಗುತ್ತದೆ. ದೇವರು ಕೂಡ ಮನುಷ್ಯರಂತೆಯೇ ದೈಹಿಕ ಏರುಪೇರುಗಳನ್ನು ಅನುಭವಿಸುತ್ತಾರೆ ಎಂಬ ಈ ಅಪೂರ್ವ ನಂಬಿಕೆ ಭಕ್ತರನ್ನು ದೇವರಿಗೆ ಮತ್ತಷ್ಟು ಹತ್ತಿರವಾಗಿಸಿದೆ.
ಅಣವಸರ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ದೇವರ ಆರೋಗ್ಯವನ್ನು ಅಧಿಕೃತವಾಗಿ ಪರೀಕ್ಷಿಸಲು ಸಮಾಜದ ಗಣ್ಯ ವೈದ್ಯರ ತಂಡವೊಂದು ಸ್ಟೆತಸ್ಕೋಪ್ ಹಿಡಿದು ದೇಗುಲಕ್ಕೆ ಧಾವಿಸಿತ್ತು. ಈ ವಿಶಿಷ್ಟ ಹೆಲ್ತ್ ಚೆಕಪ್ ತಂಡದಲ್ಲಿ ಹಿರಿಯ ವೈದ್ಯರಾದ ಡಾ. ರಜನೀಶ್ ಶ್ರೀವಾಸ್ತವ, ಡಾ. ಸ್ಮಿತಾ ಶ್ರೀವಾಸ್ತವ, ಡಾ. ಅಜಿತ್ ಕಪೂರ್, ಡಾ. ಅಶೋಕ್ ಅಸ್ಥಾನ, ಡಾ. ಶೈಲೇಶ್ ಕುಮಾರ್ ಸಿಂಗ್, ಡಾ. ಅಲೋಕ್ ಯಾದವ್ ಮತ್ತು ಡಾ. ಸ್ವಾತಿ ಯಾದವ್ ಪಾಲ್ಗೊಂಡು ದೇವರಿಗೆ ಸಾಂಪ್ರದಾಯಿಕ ನಾಡಿ ಹಾಗೂ ಆರೋಗ್ಯ ತಪಾಸಣೆಯನ್ನು ನೆರವೇರಿಸಿದರು.
ವೈದ್ಯರು ದೇವರನ್ನು ಆರೋಗ್ಯವಂತರೆಂದು ಘೋಷಿಸುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದ್ದು, ಇದರ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

