ವಿದ್ಯಾಭಾರತಿ ಚದುರಂಗ ಪಂದ್ಯಾಟ: ಪುತ್ತೂರಿನ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನಗಳ ಮಳೆ; ಸಮಗ್ರ ಪ್ರಶಸ್ತಿಯೊಂದಿಗೆ ಪ್ರಾಂತ ಮಟ್ಟಕ್ಕೆ ಆಯ್ಕೆ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ (Ambika Vidyalaya CBSE) ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಸಾಲು ಸಾಲು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕಡಬದ ಸರಸ್ವತಿ ವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಚದುರಂಗ ಪಂದ್ಯಾಟದಲ್ಲಿ ಈ ಸಾಧನೆ ಮೂಡಿಬಂದಿದೆ.

ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದ ವಿವಿಧ ಹಂತಗಳಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆದು ಮಿಂಚಿದ್ದಾರೆ. ಬಾಲಕರ ವಿಭಾಗದಲ್ಲಿ ಕಿಶೋರ ವರ್ಗದಲ್ಲಿ 10ನೇ ತರಗತಿಯ ಸಾತ್ವಿಕ್ ಜಿ. ಅವರು ಅತ್ಯುತ್ತಮ ಆಟ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲ ವರ್ಗದಲ್ಲಿ 7ನೇ ತರಗತಿಯ ಸಂಹಿತ್ ಜೋಸ್ಸಿ ಲೋಬೋ ಪ್ರಥಮ ಸ್ಥಾನ ಹಾಗೂ 7ನೇ ತರಗತಿಯ ತ್ರಿನಯ್ ರೈ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಬಾಲ ವರ್ಗ ನೇ ತರಗತಿಯ ಶಾಂಭವಿ ರಂಜನ್ ದ್ವಿತೀಯ ಸ್ಥಾನ ಪಡೆದರೆ, ಸಾನ್ವಿ ಜಿ. ನಾಲ್ಕನೇ ಸ್ಥಾನ ಹಾಗೂ ಕೆ.ಎಂ. ಶಮಿತಾ ಭಟ್ ಐದನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀ ರಾಮ ಪಿಯು ಕಾಲೇಜಿನಲ್ಲಿ ‘ರಾಷ್ಟ್ರೀಯ ವಿದ್ಯಾರ್ಥಿ ದಿವಸ್’ ಆಚರಣೆ: ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದ ರವಿ ಎಂ.ಎನ್
ಸಮಗ್ರ ಪ್ರಶಸ್ತಿ ಹಾಗೂ ಪ್ರಾಂತ ಮಟ್ಟಕ್ಕೆ ಆಯ್ಕೆ

ವೈಯಕ್ತಿಕ ವಿಭಾಗದ ಜೊತೆಗೆ ತಂಡ ವಿಭಾಗದಲ್ಲೂ ಅಂಬಿಕಾ ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡಗಳು ತಮ್ಮ ಅದ್ಭುತ ಚದುರಂಗ ಕೌಶಲ್ಯದ ಮೂಲಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಪ್ರಾಂತ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿವೆ. ಸಂಹಿತ್ ಜೋಸ್ಸಿ ಲೋಬೋ (7ನೇ ತರಗತಿ), ಮಯೂರ್ ಎಸ್. ಮಯ್ಯ (7ನೇ ತರಗತಿ), ತ್ರಿನಯ್ ರೈ (7ನೇ ತರಗತಿ), ರತುಲ್ ಅದೈತ್ (7ನೇ ತರಗತಿ) ಮತ್ತು ಹಿಮನೀಶ್ ಗೌಡ ಕೆ. (6ನೇ ತರಗತಿ). ಶಾಂಭವಿ ರಂಜನ್ (8ನೇ ತರಗತಿ), ಸಾನ್ವಿ ಜಿ. (8ನೇ ತರಗತಿ), ನೈನಿಕ ಎ. ಆರ್. (8ನೇ ತರಗತಿ), ಕೆ.ಎಂ. ಶಮಿತಾ ಭಟ್ (8ನೇ ತರಗತಿ) ಮತ್ತು ಅನನ್ಯ ಬಿ. ಪ್ರಾಂತ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಚದುರಂಗ ಮಣೆಯಲ್ಲಿ ಅದ್ಭುತ ನಡೆಗಳ ಮೂಲಕ ಜಯಭೇರಿ ಬಾರಿಸಿ, ಪ್ರಾಂತ ಮಟ್ಟಕ್ಕೆ ತೇರ್ಗಡೆಯಾಗಿರುವ ಅಂಬಿಕಾ ವಿದ್ಯಾಲಯದ ಈ ಬಾಲ ಚತುರರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ತೀವ್ರ ಹರ್ಷ ವ್ಯಕ್ತಪಡಿಸಿ ಮುಂದಿನ ಹಂತದ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *