ಬಂಟ್ವಾಳ: ಸಂಸ್ಕೃತಿಯ ಉಳಿವಿಗಾಗಿ ಸಂಸ್ಕೃತ ಭಾಷೆಯ ಉಳಿವು ಅತ್ಯಂತ ಮುಖ್ಯವಾಗಿದೆ. ಸಂಸ್ಕೃತ ನಶಿಸಿದರೆ ನಮ್ಮ ಜೀವನ ಹಾಗೂ ಸಂಸ್ಕೃತಿ ಬೋನ್ಸಾಯ್ ಗಿಡದಂತೆ ಕುಬ್ಜವಾಗುತ್ತದೆ. ಆದ್ದರಿಂದ ಸಂಸ್ಕೃತದ ಕಲಿಕೆ ಮತ್ತು ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಕಲ್ಲಡ್ಕದ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಶ್ರೀರಾಮ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಂಸ್ಕೃತ ಭಾಷಾ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ ಮತ್ತು ವಾರ್ಷಿಕ ಸಭೆ ಉದ್ಘಾಟಿಸಿ, ಸಂಘದ ನೂತನ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ಅನೇಕ ವರ್ಷಗಳಾದರೂ ಗುಲಾಮಿತನದ ಮನೋಭಾವ ಇನ್ನೂ ಉಳಿದಿದೆ. ಆಂಗ್ಲ ಭಾಷೆಯ ದಾಸ್ಯದಿಂದ ಹೊರಬಂದು ನಮ್ಮತನ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ಸಂಸ್ಕೃತ ನಮ್ಮ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲ ಭಾಷೆಯಾಗಿದೆ. ಸಿದ್ದೇಶ್ವರ ಸ್ವಾಮೀಜಿಯವರ ಮಾತಿನಂತೆ, ನಮ್ಮನ್ನು ನಾವು ಗೆದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದರು.
ಇದನ್ನೂ ಓದಿ: ಶ್ರೀರಾಮ ಪದವಿ ಪೂರ್ವ ವಿದ್ಯಾಲಯಕ್ಕೆ ಬೆಂಗಳೂರಿನ ಹೈಕೋರ್ಟ್ ವಕೀಲರು ಹಾಗೂ ಉದ್ಯಮಿಗಳು ಭೇಟಿ
ಉಪನ್ಯಾಸಕರು ನಿರಂತರವಾಗಿ ಹೊಸ ವಿಷಯಗಳನ್ನು ಅರಿತುಕೊಳ್ಳುವ ವಿದ್ಯಾರ್ಥಿಗಳಾಗಿರಬೇಕು. ಇಂತಹ ಕಾರ್ಯಾಗಾರಗಳು ಉಪನ್ಯಾಸಕರ ಜ್ಞಾನ ಹಾಗೂ ಕೌಶಲ ವೃದ್ಧಿಗೆ ಸಹಕಾರಿಯಾಗುತ್ತವೆ. ನಾವು ಸಂಘಟಿತರಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ. ಉತ್ತಮ ಕಾರ್ಯಗಳಿಗೆ ಪ್ರಾಂಶುಪಾಲರ ಸಂಘ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಪೂರ್ಣಾಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಚಿತಾ ರಾಘವೇಂದ್ರ, ವೃಷಾ, ಗ್ರೀಷ್ಮ ಹಾಗೂ ನಿಜ ಕುಲಾಲ್ ಮತ್ತು ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ರಮೇಶ್ ಆಚಾರ್ಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಸುರೇಖಾ ತಂತ್ರಿ ವಂದಿಸಿದರು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಗೋಷ್ಠಿಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಪರಮೇಶ್ವರ ಹೆಗಡೆ ಅವರು ‘ಸಂಸ್ಕೃತ ಕಥಾ ಸಾಹಿತ್ಯ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ. ಪದ್ಮನಾಭ ಮರಾಠೆ ಅವರು ‘ಪ್ರಾಚೀನ ಸಂಸ್ಕೃತ ಗ್ರಂಥಗಳ ಹೊಸ ಪರಿಷ್ಕರಣೆ’ ಕುರಿತು ವಿಚಾರ ಮಂಡಿಸಿದರು. ಶಿರಸಿಯ ಸಂಸ್ಕೃತ ಭಾಷಾ ಉಪನ್ಯಾಸಕ ಡಾ. ಸೂರ್ಯನಾರಾಯಣ ಹೆಗಡೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಸ್ಕೃತ ಪ್ರಶ್ನೆಪತ್ರಿಕೆಗಳ ಸ್ವರೂಪದ ಕುರಿತು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ ವಿಠಲ ಅವರು ಮಾತನಾಡಿ, ಸಂಘಟನೆ ಮತ್ತಷ್ಟು ಬಲಗೊಳ್ಳಬೇಕು. ಪ್ರತಿಯೊಂದು ಪಠ್ಯ ವಿಷಯದ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಸಂಘಟಿತರಾದರೆ ಅನೇಕ ಸಾಧನೆಗಳನ್ನು ಮಾಡಬಹುದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಪ್ರಸನ್ನಕುಮಾರ ಐತಾಳ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಸಮಾರೋಪ ಭಾಷಣ ಮಾಡಿದರು. ಉಪನ್ಯಾಸಕ ವೆಂಕಟರಮಣ ಪೈ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಮಧ್ಯಸ್ಥ ವಂದಿಸಿದರು.
ಜಿಲ್ಲೆಯ ಮೂವತ್ತಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

