ಕಲ್ಲಡ್ಕ: ಇಲ್ಲಿನ ಪ್ರತಿಷ್ಠಿತ ಶ್ರೀರಾಮ ಪದವಿ ಪೂರ್ವ ವಿದ್ಯಾಲಯಕ್ಕೆ ದಿನಾಂಕ 15.07.2026 ರಂದು ಹೈಕೋರ್ಟ್ ವಕೀಲರು, ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯ ಅತಿಥಿಗಳು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ನೇತೃತ್ವದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಅಡ್ವೊಕೇಟ್ ಶ್ರೀ ಸಿದ್ಧಾರ್ಥ್, ಅಡ್ವೊಕೇಟ್ ಶ್ರೀ ವ್ಯಾಸ್ ಕಿರಣ್ ಉಪಾಧ್ಯ, ಉದ್ಯಮಿ ಶ್ರೀ ಗಿರೀಶ್, ಉದ್ಯಮಿ ಪ್ರತಾಪ್, ಸಾಮಾಜಿಕ ಕಾರ್ಯಕರ್ತ ರಮೇಶ್ ಕಾಸರಗೋಡು, ಕೋಲಾರ ವಿಭಾಗ ಪ್ರಚಾರಕರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿ ಪ್ರಶಾಂತ್ ಪಳ್ಳಮಜಲು, ಶ್ರೀರಾಮ ಪಿಯು ಕಾಲೇಜು ಪ್ರಾಂಶುಪಾಲ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ವಿದ್ಯಾಲಯಕ್ಕೆ ಆಗಮಿಸಿದ ಅತಿಥಿ ಗಣ್ಯರು ಕಾಲೇಜಿನ ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಿದ ಸಾಂಪ್ರದಾಯಿಕ ‘ಸರಸ್ವತಿ ವಂದನಾ’ ಕಾರ್ಯಕ್ರಮವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ, ವಿದ್ಯಾರ್ಥಿಗಳ ಶಿಸ್ತಿಗೆ ಮನಸೋತರು. ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಹೈಕೋರ್ಟ್ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಅವರು ವಿದ್ಯಾಲಯದ ಶೈಕ್ಷಣಿಕ ಪದ್ಧತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದನ್ನೂ ಓದಿ: ಇನ್ಮುಂದೆ 15 ನಿಮಿಷದಲ್ಲಿ 108 ಆ್ಯಂಬುಲೆನ್ಸ್ ಬರದಿದ್ರೆ 5,000 ರೂ. ಭಾರಿ ದಂಡ
ಶ್ರೀರಾಮ ವಿದ್ಯಾಕೇಂದ್ರವು ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆಯ ಜೊತೆಗೆ ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು, ಶಿಸ್ತು, ದೇಶಭಕ್ತಿ ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ (Personality Development) ಹೆಚ್ಚಿನ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ದೇಶದ ಉತ್ತಮ ನಾಗರಿಕರಾಗಿ ಸಮಾಜಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು,” ಎಂದು ಅವರು ಕರೆ ನೀಡಿದರು. ವಿದ್ಯಾಲಯದ ಗಣಕಶಾಸ್ತ್ರ ಉಪನ್ಯಾಸಕಿಯಾದ ಚೈತನ್ಯ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರೂಪಿಸಿ, ನಿರ್ವಹಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

