ಉಳ್ಳಾಲ ಕಡಲತೀರದಲ್ಲಿ ಪ್ರಕೃತಿ ವಿಸ್ಮಯ; ದಡಕ್ಕೆ ಬಂದು ಬಿದ್ದ ಲಕ್ಷಾಂತರ ಬೂತಾಯಿ ಮೀನುಗಳನ್ನು ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಮುದ್ರ ತೀರದಲ್ಲಿ ಇಂದು ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ದಂಡು ದಂಡಾಗಿ ಸಂಚರಿಸುವ ಬೂತಾಯಿ (Sardines) ಮೀನುಗಳು ಒಮ್ಮಿಂದೊಮ್ಮೆಗೆ ಕಡಲತೀರದ ಮರಳು ದಡಕ್ಕೆ ಬಂದು ಬಿದ್ದಿವೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಬೆಳ್ಳಿ ಹೊಳೆಯುವಂತೆ ಬಿದ್ದಿದ್ದ ಮೀನುಗಳ ರಾಶಿಯನ್ನು ಕಂಡು ಸ್ಥಳೀಯರು ಹಾಗೂ ಪ್ರವಾಸಿಗರು ಆಶ್ಚರ್ಯಚಕಿತರಾಗಿದ್ದಾರೆ.

ಸಮುದ್ರದ ಆಳದಲ್ಲಿರಬೇಕಾದ ಮೀನುಗಳು ಒಮ್ಮೆಗೆ ದಡ ಸೇರಲು ಪ್ರಕೃತಿ ಹಾಗೂ ಮಾನವನ ಹಸ್ತಕ್ಷೇಪದ ವಿಚಿತ್ರ ಕಾಕತಾಳೀಯ ಕಾರಣವಾಗಿದೆ ಬೂತಾಯಿ ಮೀನುಗಳು ಯಾವಾಗಲೂ ಸಮುದ್ರದಲ್ಲಿ ಲಕ್ಷಾಂತರ ಸಂಖ್ಯೆಯ ದೊಡ್ಡ ಗುಂಪುಗಳಲ್ಲಿ ಒಟ್ಟಾಗಿ ಸಂಚರಿಸುತ್ತವೆ. ಇಂದು ಕೂಡ ಇಂತಹದ್ದೇ ಒಂದು ಬೃಹತ್ ಗುಂಪು ಸಾಗುತ್ತಿರುವಾಗ, ಆಕಸ್ಮಿಕವಾಗಿ ನಾಡದೋಣಿಯೊಂದು ಆ ಮೀನುಗಳ ಹಿಂಡಿಗೆ ಅಡ್ಡ ಬಂದಿದೆ. ಇದರಿಂದ ಹೆದರಿದ ಮೀನುಗಳ ಹಿಂಡು ದಿಕ್ಕು ತಪ್ಪಿ ತನ್ನ ಪಥವನ್ನು ಬದಲಾಯಿಸಿ ದಡದ ಕಡೆಗೆ ಮುಖ ಮಾಡಿದೆ.

ಇಲ್ಲಿದೆ ನೋಡಿ ವಿಡಿಯೋ:

ಇದೇ ಸನ್ನಿವೇಶದಲ್ಲಿ ಕಡಲಿನಲ್ಲಿ ಎದ್ದ ಬೃಹತ್ ಗಾತ್ರದ ಅಲೆಗಳು ಈ ಮೀನಿನ ಗುಂಪಿನ ಮೇಲೆ ಅತ್ಯಂತ ಜೋರಾಗಿ ಅಪ್ಪಳಿಸಿದೆ. ಅಲೆಗಳ ರಭಸಕ್ಕೆ ಸಿಲುಕಿದ ಇಡೀ ಮೀನಿನ ಸಮೂಹವು ಒಮ್ಮೆಗೇ ಉಳ್ಳಾಲ ಕಡಲತೀರದ ದಡಕ್ಕೆ ಬಂದು ಬಿದ್ದಿದೆ. ಅಲೆಗಳ ರಭಸಕ್ಕೆ ದಡದ ಮರಳಿನ ಮೇಲೆ ಬಂದು ಬಿದ್ದ ಮೀನುಗಳಿಗೆ ವಾಪಾಸ್ ನೀರಿಗೆ ಹೋಗಲು ಸಾಧ್ಯವಾಗದೆ ತೀರದಲ್ಲೇ ಸಿಲುಕಿಕೊಂಡಿವೆ.

ಇದನ್ನೂ ಓದಿ:  ಬಂಟ್ವಾಳ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: 26.18 ಕೋಟಿ ರೂ. ವೆಚ್ಚದ ನೂತನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಕಡಲತೀರದಲ್ಲಿ ಜೀವಂತ ಬೂತಾಯಿ ಮೀನುಗಳು ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಉಳ್ಳಾಲದ ಸುತ್ತಮುತ್ತಲಿನ ನೂರಾರು ಸಾಮಿಪ್ಯದ ನಿವಾಸಿಗಳು ತೀರದ ಕಡೆಗೆ ಓಡೋಡಿ ಬಂದಿದ್ದಾರೆ. ಜನ ಕೈಗೆ ಸಿಕ್ಕ ಬಕೆಟ್‌ಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಬುಟ್ಟಿಗಳನ್ನು ಹಿಡಿದುಕೊಂಡು ಮುಗಿಬಿದ್ದು ಮೀನುಗಳನ್ನು ತುಂಬಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *